ಇಂಗ್ಲೀಷ್ ಲೇಡಿಗಳಿಗೆ ಭಾರತದ ನಾರಿಯರ ಸವಾಲು… ಅಂಕಿ ಅಂಶಗಳ ಪ್ರಕಾರ ಭಾರತದ ಹೆಣ್ಮಕ್ಕಳೇ ಸ್ಟ್ರಾಂಗ್ ಗುರು..!
ಭಾರತ ಮಹಿಳಾ ಕ್ರಿಕೆಟ್ ತಂಡ ಮತ್ತು ಇಂಗ್ಲೆಂಡ್ ಮಹಿಳಾ ಕ್ರಿಕೆಟ್ ತಂಡಗಳ ನಡುವೆ ಜೂನ್ 16ರಿಂದ ಏಕೈಕ ಟೆಸ್ಟ್ ಪಂದ್ಯ ನಡೆಯಲಿದೆ. ಈಗಾಗಲೇ ಭಾರತೀಯ ಮಹಿಳಾ ತಂಡದ ಆಟಗಾರ್ತಿಯರು ಕ್ವಾರಂಟೈನ್ ನಲ್ಲಿದ್ದಾರೆ. ಹಾಗೇ ಭಾರತ ಮಹಿಳಾ ತಂಡದ ಜೆರ್ಸಿ ಕೂಡ ಅನಾವರನಗೊಂಡಿದೆ.
ಅಂದ ಹಾಗೇ ಇದು ಭಾರತ ಮಹಿಳಾ ಕ್ರಿಕೆಟ್ ತಂಡಕ್ಕೆ ಅವಿಸ್ಮರಣೀಯ ಟೆಸ್ಟ್ ಪಂದ್ಯವಾಗಿದೆ. ಬಹುತೇಕ ಆಟಗಾರ್ತಿಯರಿಗೆ ಇದು ಚೊಚ್ಚಲ ಟೆಸ್ಟ್ ಪಂದ್ಯ. ಯಾಕಂದ್ರೆ ಭಾರತ ಮಹಿಳಾ ಕ್ರಿಕೆಟ್ ತಂಡ ಆರು ವರ್ಷಗಳ ಬಳಿಕ ಟೆಸ್ಟ್ ಪಂದ್ಯವನ್ನಾಡುತ್ತಿದೆ.
2014ರ ನಂತರ ಭಾರತ ಮಹಿಳಾ ತಂಡ ಯಾವುದೇ ಟೆಸ್ಟ್ ಪಂದ್ಯಗಳನ್ನು ಆಡಿಲ್ಲ. 2014ರಲ್ಲಿ ಮೈಸೂರಿನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಟೆಸ್ಟ್ ಪಂದ್ಯವನ್ನು ಆಡಿತ್ತು. ಈ ಪಂದ್ಯದಲ್ಲಿ ಭಾರತ ತಂಡ ಇನಿಂಗ್ಸ್ ಮತ್ತು 34 ರನ್ ಗಳಿಂದ ಗೆದ್ದುಕೊಂಡಿತ್ತು. ಆದಾದ ನಂತರ ಇದೀಗ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯವನ್ನು ಆಡುತ್ತಿದೆ.
ಇನ್ನು ವಿಶ್ವ ಮಹಿಳಾ ಕ್ರಿಕೆಟ್ ನಲ್ಲಿ ಟೆಸ್ಟ್ ಪಂದ್ಯಗಳು ಅಪರೂಪವಾಗುತ್ತಿವೆ. 2015ರಿಂದ ಮಹಿಳಾ ಕ್ರಿಕೆಟ್ ನಲ್ಲಿ ನಡೆದಿರುವುದು ಬರೀ ಆರು ಟೆಸ್ಟ್ ಪಂದ್ಯಗಳು ಮಾತ್ರ. ಈ ಎಲ್ಲಾ ಪಂದ್ಯಗಳನ್ನು ಆಡಿದ್ದು ಕೂಡ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಮಹಿಳಾ ತಂಡಗಳು ಮಾತ್ರ.
ಇನ್ನು ಒಟ್ಟಾರೆಯಾಗಿ ಭಾರತ ಮಹಿಳಾ ತಂಡ 36 ಟೆಸ್ಟ್ ಪಂದ್ಯಗಳನ್ನು ಆಡಿದೆ. ಇದ್ರಲ್ಲಿ ಐದು ಪಂದ್ಯಗಳನ್ನು ಗೆದ್ದುಕೊಂಡ್ರೆ, ಆರು ಪಂದ್ಯಗಳಲ್ಲಿ ಸೋತಿದೆ. 25 ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಇನ್ನೊಂದು ವಿಶೇಷತೆ ಅಂದ್ರೆ ಭಾರತೀಯ ಮಹಿಳಾ ತಂಡ ಆರು ವರ್ಷಗಳ ಹಿಂದೆ ನಡೆದಿದ್ದ ಮೂರು ಟೆಸ್ಟ್ ಪಂದ್ಯಗಳನ್ನು ಗೆದ್ದುಕೊಂಡಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಒಂದು ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳಲ್ಲಿ ಜಯ ಸಾಧಿಸಿದೆ.
1976ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಚೊಚ್ಚಲ ಟೆಸ್ಟ್ ಪಂದ್ಯವನ್ನು ಆಡಿದ್ದ ಭಾರತ ಮಹಿಳಾ ತಂಡ ಡ್ರಾ ಮಾಡಿಕೊಂಡಿತ್ತು. ಆದಾದ ನಂತರ ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಬಾರಿ ಸೋತ್ರೆ, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ತಲಾ ಒಂದೊಂದು ಪಂದ್ಯಗಳಲ್ಲಿ ಸೋಲು ಅನುಭವಿಸಿದೆ.
ಇನ್ನು 1995ರಲ್ಲಿ ಇಂಗ್ಲೆಂಡ್ ವಿರುದ್ದ ನಡೆದಿದ್ದ ಏಕೈಕ ಟೆಸ್ಟ್ ಪಂದ್ಯದ ಸೋಲಿನ ನಂತರ ಭಾರತ ಮಹಿಳಾ ತಂಡ ಯಾವುದೇ ಪಂದ್ಯಗಳನ್ನು ಸೋತಿಲ್ಲ. ನಾಲ್ಕು ಸರಣಿಗಳನ್ನು ಡ್ರಾ ಮಾಡಿಕೊಂಡ್ರೆ, ಎರಡು ಸರಣಿಗಳನ್ನು ಗೆದ್ದುಕೊಂಡಿದೆ.
ಒಟ್ಡಾರೆಯಾಗಿ ಭಾರತ ಮತ್ತು ಇಂಗ್ಲೆಂಡ್ ಮಹಿಳಾ ತಂಡಗಳು ಇಲ್ಲಿಯವರೆಗೆ 14 ಟೆಸ್ಟ್ ಪಂದ್ಯಗಳನ್ನು ಆಡಿವೆ. ಇದ್ರಲ್ಲಿ ಎರಡು ಪಂದ್ಯಗಳಲ್ಲಿ ಜಯ, ಒಂದು ಪಂದ್ಯದಲ್ಲಿ ಸೋಲು ಹಾಗೂ 11 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ.
ಒಟ್ಟಿನಲ್ಲಿ ಜೂನ್ 16ರಿಂದ ನಡೆಯಲಿರುವ ಏಕೈಕ ಟೆಸ್ಟ್ ಪಂದ್ಯ ಸಾಕಷ್ಟು ಕುತೂಹಲ ಮೂಡಿಸಿದೆ. ಭಾರತ ಮಹಿಳಾ ತಂಡ ಮತ್ತೆ ಗೆಲುವಿನ ಹಾದಿಯಲ್ಲಿ ಸಾಗುತ್ತಾ ಅನ್ನೋದನ್ನು ಕಾದು ನೋಡಬೇಕು.