ದೆಹಲಿಯಲ್ಲಿ ವಿಶ್ವದ ಅತಿದೊಡ್ಡ ಕೋವಿಡ್ ಆಸ್ಪತ್ರೆ
ಹೊಸದಿಲ್ಲಿ, ಜುಲೈ 6: ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಅವರು 10,000 ಹಾಸಿಗೆಗಳ ಸರ್ದಾರ್ ಪಟೇಲ್ ಕೋವಿಡ್ ಕೇರ್ ಸೆಂಟರ್ ಮತ್ತು ಆಸ್ಪತ್ರೆ (ಎಸ್‌ಪಿಸಿಸಿಎಚ್) ಅನ್ನು ರಾಧಾ ಸೋಮಿ ಸತ್ಸಂಗ್ ಬಿಯಾಸ್‌ನಲ್ಲಿ ಭಾನುವಾರ ಉದ್ಘಾಟಿಸಿದರು. ದಕ್ಷಿಣ ದೆಹಲಿ ಜಿಲ್ಲಾಡಳಿತವು ಕೇವಲ10 ದಿನಗಳ ದಾಖಲೆಯ ಸಮಯದಲ್ಲಿ ಕೇಂದ್ರ ಗೃಹ ಸಚಿವಾಲಯದ ಸಂಪೂರ್ಣ ಬೆಂಬಲದೊಂದಿಗೆ ಈ ಕೋವಿಡ್ ಆಸ್ಪತ್ರೆ ಸ್ಥಾಪಿಸಿದೆ.

ದೆಹಲಿಯಲ್ಲಿ ತೀವ್ರಗತಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ನೂತನ ‘ಸರ್ದಾರ್ ವಲ್ಲಭಭಾಯಿ ಪಟೇಲ್ ಕೋವಿಡ್ ಆಸ್ಪತ್ರೆ’ ಸ್ಥಾಪಿಸಲಾಗಿದ್ದು, ಈ ಕೇಂದ್ರವು 1,700 ಅಡಿ ಉದ್ದ, 700 ಅಡಿ ಅಗಲ ವಿಸ್ತೀರ್ಣವಿದೆ. 200 ಕೊಠಡಿಗಳನ್ನು ಹೊಂದಿದ್ದು, ತಲಾ 50 ಹಾಸಿಗೆಗಳಿವೆ.
ಈ ಆಸ್ಪತ್ರೆಯು 10,000 ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ಹೊಂದಿದ್ದು, 1,000 ವಿಶೇಷ ತೀವ್ರ ನಿಗಾ ಘಟಕದ ಬೆಡ್ಗಳು ಹಾಗೂ ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ. ವೈದ್ಯರು ಸೇರಿದಂತೆ 2,000 ಕ್ಕೂ ಹೆಚ್ಚು ಐಟಿಬಿಪಿ ಮತ್ತು ಇತರ ಕೇಂದ್ರ ಸಶಸ್ತ್ರ ಪೊಲೀಸ್ ಪಡೆ ಸಿಬ್ಬಂದಿಗಳು ಆಸ್ಪತ್ರೆಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು, 75 ಕ್ಕೂ ಅಧಿಕ ಆ್ಯಂಬುಲೆನ್ಸ್ ಸೌಲಭ್ಯ ಸಹ ಇರುವುದಾಗಿ ವರದಿಗಳಿಂದ ತಿಳಿದು ಬಂದಿದೆ.








