ಆಟ ನಿಲ್ಲಿಸಿದ ವಿಶ್ವದ ಅತಿ ವೇಗದ ರೋಲರ್ ಕೋಸ್ಟರ್ – ಕಾರಣವೇನು ಗೊತ್ತಾ..?
ಜಪಾನ್ : ಜಪಾನ್ ನಲ್ಲಿರುವ ವಿಶ್ವದ ಅತ್ಯಂತ ವೇಗದ ರೋಲರ್ ಇದೀಗ ತನ್ನ ಆಟ ನಿಲ್ಲಿಸಿದೆ. ಪ್ರವಾಸಿಗರ ಮೂಳೆಗಳು ಮುರಿದ ಪ್ರಕರಣ ವರದಿಯಾದ ಹಿನ್ನೆಲೆಯಲ್ಲಿ ಜಪಾನ್ ಪ್ರವಾಸಿ ತಾಣ ರೋಲರ್ ಕೋಸ್ಟರ್ ಸೇವೆಯನ್ನು ನಿಲ್ಲಿಸಿದೆ.
ಜಪಾನ್ನ ಯಮನಶಿಯ ಫುಜಿಯೊಶಿಡಾದ ದೋ-ಡೋಡೊನ್ಪಾ ಥೀಮ್ ಪಾರ್ಕಿನಲ್ಲಿದ್ದ ರೋಲರ್ ಕೋಸ್ಟರ್ 1.8 ಸೆಕೆಂಡಿನಲ್ಲಿ 172 ಕಿ.ಮೀ/ಗಂಟೆ ವೇಗ ಪಡೆದುಕೊಳ್ಳುತ್ತಿತ್ತು. ಇದು ವಿಶ್ವದ ಅತಿ ವೇಗದ ರೋಲರ್ ಕೋಸ್ಟರ್ ಎಂದೆನಿಸಿಕೊಂಡಿತ್ತು. ಆದ್ರೆ ಈ ರೋಲರ್ ಕೋಸ್ಟರ್ ನಲ್ಲಿ ಇನ್ಮುಂದೆ ಜನರು ಕೂರೋದಕ್ಕೆ ಆಗುವುದಿಲ್ಲ.
2001ರಲ್ಲಿ ಈ ಸೇವೆ ಆರಂಭಗೊಂಡಿತ್ತು. ಡಿಸೆಂಬರ್ 2020 ರಿಂದ ಇಲ್ಲಿಯವರೆಗೆ ಮೂಳೆ ಮುರಿದ 6 ಪ್ರಕರಣಗಳು ವರದಿಯಾದ ಹಿನ್ನೆಲೆಯಲ್ಲಿ ರೋಲರ್ ಕೋಸ್ಟರ್ ಆಟವನ್ನು ಬಂದ್ ಮಾಡಲಾಗಿದೆ ಎಂದು ವರದಿಯಾಗಿದೆ.
ಪ್ರಕರಣಗಳು ಹೆಚ್ಚು ಗಂಭೀರವಾಗಿದ್ದ ಕಾರಣ ಥೀಮ್ ಪಾರ್ಕ್ ಆಡಳಿತ ಮಂಡಳಿ ಈ ಸೇವೆಯನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಿದ್ದಾರೆ. ರೋಲರ್ ಕೋಸ್ಟರ್ ನಲ್ಲಿ ಯಾವುದೇ ತಾಂತ್ರಿಕ ದೋಷ ಇಲ್ಲದಿರುವ ವಿಚಾರ ತನಿಖೆಯ ವೇಳೆ ಬೆಳಕಿಗೆ ಬಂದಿದೆ.
ರೋಲರ್ ಕೋಸ್ಟರ್ ವಿನ್ಯಾಸಗಳಲ್ಲಿ ಪರಿಣತಿ ಹೊಂದಿರುವ ನಿಹಾನ್ ವಿಶ್ವವಿದ್ಯಾನಿಲಯದ ವಾಸ್ತುಶಿಲ್ಪ ಪ್ರಾಧ್ಯಾಪಕರಾದ ನಯೋಯಾ ಮಿಯಾಸಾಟೊ ಈ ಬಗ್ಗೆ ಮಾತನಾಡಿದ್ದು, ರೋಲರ್ ಕೋಸ್ಟರ್ ನಲ್ಲಿ ವೇಗ ಜಾಸ್ತಿ ಇದ್ದು, ಸರಿಯಾಗಿ ಕುಳಿತುಕೊಳ್ಳದ ಕಾರಣ ಮೂಳೆಗಳು ಮುರಿದಿರಬಹುದು. ಹೀಗಾಗಿ ಪಾರ್ಕ್ ಸಿಬ್ಬಂದಿ ವ್ಯಕ್ತಿಗಳು ಸರಿಯಾಗಿ ಕುಳಿತುಕೊಂಡಿದ್ದಾರೋ ಇಲ್ಲವೋ ಎಂಬುದನ್ನು ಪರೀಕ್ಷಿಸಬೇಕು. ಇದು ಸಿಬ್ಬಂದಿಯ ಜವಾಬ್ದಾರಿ ಎಂದು ಹೇಳಿದ್ದಾರೆ.








