ಕ್ರಿಕೆಟ್ ಜನಕರ ನಾಡಲ್ಲಿ ಜ್ವಾಲೆಯಾಗುತ್ತಾ ಬೆಂಕಿ ಚೆಂಡು… ಅಥವಾ ಕರಗಿ ಹೋಗುತ್ತಾ ಮಂಜುಗಡ್ಡೆ..!
ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯ. ಇದು ಟೆಸ್ಟ್ ಕ್ರಿಕೆಟ್ ನ ಚರಿತ್ರೆಯ ಮಹೋನ್ನತ ಪಂದ್ಯ. 144 ವರ್ಷಗಳ ಇತಿಹಾಸವನ್ನು ಹೊಂದಿರುವ ಟೆಸ್ಟ್ ಕ್ರಿಕೆಟ್ ನಲ್ಲಿ ಚಾಂಪಿಯನ್ ಪಟ್ಟಕ್ಕಾಗಿ ನಡೆಯುತ್ತಿರುವ ಪಂದ್ಯ. ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ಪ್ರತಿಷ್ಠೆಯ ಪಣವಾಗಿರುವ ಪಂದ್ಯ.
ಹೌದು, ಇಂಗ್ಲೆಂಡ್ ನ ಸೌತಂಪ್ಟನ್ ನಲ್ಲಿ ನಡೆಯಲಿರುವ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಜೂನ್ 18ರಿಂದ ಆರಂಭವಾಗಲಿರುವ ಈ ಪಂದ್ಯವನ್ನು ಕ್ರಿಕೆಟ್ ಜಗತ್ತು ಕಾತರದಿಂದ ಕಾಯುತ್ತಿದೆ..
ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ತಂಡಗಳ ನಾಯಕರನ್ನು ಬೆಂಕಿಚೆಂಡು ಮತ್ತು ಮಂಜುಗಡ್ಡೆಗೆ ಹೋಲಿಕೆ ಮಾಡಲಾಗುತ್ತಿದೆ. ಆಕ್ರಮಣಕಾರಿ ಪ್ರವೃತ್ತಿಯ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೆಂಕಿ ಚೆಂಡು. ಕೂಲ್ ಆಗಿಯೇ ತಂಡವನ್ನು ಮುನ್ನೆಡೆಸುತ್ತಿರುವ ಕೇನ್ ವಿಲಿಯಮ್ಸನ್ ಮಂಜುಗಡ್ಡೆ.
ಇವರಿಬ್ಬರು ಪ್ರತಿಷ್ಠಿತ ಟೂರ್ನಿಯಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ.
ದಶಕಗಳ ಹಿಂದೆ ನಡೆದಿದ್ದ 19 ವಯೋಮಿತಿ ವಿಶ್ವಕಪ್ ಟೂರ್ನಿಯಲ್ಲಿ ನಾಯಕರಾಗಿ ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಹಣಾಹಣಿ ನಡೆಸಿದ್ದರು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗೆಲುವಿನ ನಗೆ ಬೀರಿದ್ದರು.
ಬಳಿಕ 2019ರ ವಿಶ್ವಕಪ್ ಸೆಮಿಫೈನಲ್ ನಲ್ಲಿ ಮತ್ತೆ ವಿರಾಟ್ ಮತ್ತು ವಿಲಿಯಮ್ಸನ್ ಪರಸ್ಪರ ಕಾದಾಟ ನಡೆಸಿದ್ದರು. ಆ ಪಂದ್ಯದಲ್ಲಿ ವಿಲಿಯಮ್ಸನ್ ಗೆಲುವಿನ ನಗೆ ಬೀರಿದ್ದರು.
ಇದೀಗ ಮತ್ತೆ ವಿರಾಟ್ ಮತ್ತು ಕೇನ್ ವಿಲಿಮಯನ್ಸ್ ಮುಖಾಮುಖಿಯಾಗುತ್ತಿದ್ದಾರೆ. ಅದು ಕೂಡ ಚೊಚ್ಚಲ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ಪಂದ್ಯದಲ್ಲಿ. 19 ವಯೋಮಿತಿ ವಿಶ್ವಕಪ್ ಸೋಲಿಗೆ ವಿರಾಟ್ ವಿರುದ್ಧ 2019ರ ವಿಶ್ವಕಪ್ ನಲ್ಲಿ ಕೇನ್ ವಿಲಿಯಮ್ಸನ್ ಪ್ರತಿಕಾರ ತೀರಿಸಿಕೊಂಡಿದ್ದರು. ಇದೀಗ 2019ರ ಸೋಲಿಗೆ ವಿರಾಟ್ ಕೊಹ್ಲಿ 2021ರ ವಿಶ್ವ ಟೆಸ್ಟ್ ಚಾಂಪಿಯನ್ ಷಿಪ್ ಫೈನಲ್ ನಲ್ಲಿ ಕೇನ್ ವಿಲಿಯಮ್ಸನ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾರಾ ಅನ್ನೋದನ್ನು ಕಾದು ನೋಡಬೇಕು.
ಹಾಗೇ ನೋಡಿದ್ರೆ, ವಿರಾಟ್ ಕೊಹ್ಲಿ ಮತ್ತು ಕೇನ್ ವಿಲಿಯಮ್ಸನ್ ಇಬ್ಬರು ಕೂಡ ಆಧುನಿಕ ಕ್ರಿಕೆಟ್ ನ ಚಾಂಪಿಯನ್ ಆಟಗಾರರು. ಐಸಿಸಿ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಕೇನ್ ವಿಲಿಯಮ್ಸ್ ಎರಡನೇ ಸ್ಥಾನದಲ್ಲಿದ್ರೆ, ವಿರಾಟ್ ಕೊಹ್ಲಿ ನಾಲ್ಕನೇ ಶ್ರೇಯಾಂಕದಲ್ಲಿದ್ದಾರೆ.
ಆದ್ರೆ ಟೆಸ್ಟ್ ಪಂದ್ಯಗಳ ರನ್ ಗಳಿಕೆಯಲ್ಲಿ ವಿರಾಟ್ ಕೊಹ್ಲಿ ಕೇನ್ ವಿಲಿಯಮ್ಸನ್ ಗಿಂತ ಸ್ವಲ್ಪ ಮುನ್ನಡೆಯಲ್ಲಿದ್ದಾರೆ. 91 ಟೆಸ್ಟ್ ಪಂದ್ಯಗಳನ್ನು ಆಡಿರುವ ವಿರಾಟ್ ಕೊಹ್ಲಿ 27 ಶತಕ ಹಾಗೂ 25 ಅರ್ಧಶತಕಗಳ ಸಹಾಯದಿಂದ 7490 ರನ್ ಗಳಿಸಿದ್ದಾರೆ.
ಇನ್ನು ಕೇನ್ ವಿಲಿಯಮ್ಸನ್ ಅವರು 84 ಟೆಸ್ಟ್ ಪಂದ್ಯಗಳಲ್ಲಿ 24 ಶತಕ ಹಾಗೂ 32 ಅರ್ಧಶತಕಗಳ ನೆರವಿನಿಂದ 7129 ರನ್ ಗಳಿಸಿದ್ದಾರೆ.
ಅಂದ ಹಾಗೇ ವಿರಾಟ್ ಕೊಹ್ಲಿಯವರ ಬ್ಯಾಟಿಂಗ್ ನಲ್ಲಿ ಅಬ್ಬರವನ್ನು ಕಾಣಬಹುದು. ಆಕ್ರಮಣಕಾರಿ ಪ್ರವೃತ್ತಿ, ಹಠ, ಗೆಲ್ಲಲೇಕು ಅನ್ನೋ ಛಲ, ಎದುರಾಳಿ ತಂಡಕ್ಕೆ ಭಯ ಹುಟ್ಟಿಸುವ ಮುಖಭಾವದೊಂದಿಗೆ ಸುನಾಮಿಯಂತೆ ರನ್ ಗಳಿಸುತ್ತಾರೆ.
ಆದ್ರೆ ಕೇನ್ ವಿಲಿಯಮ್ಸನ್ ಹಾಗಲ್ಲ. ಸದಾ ಕೂಲ್ ಆಗಿಯೇ ಇರುತ್ತಾರೆ. ಯಾವತ್ತೂ ತಾಳ್ಮೆ ಕಳೆದುಕೊಳ್ಳುವುದಿಲ್ಲ. ಎದುರಾಳಿ ತಂಡ ಎಷ್ಟೇ ಸವಾಲು ಹಾಕಲಿ ಕೇನ್ ವಿಲಿಯಮ್ಸನ್ ಮುಖದಲ್ಲಿ ಸದಾ ನಗುವಿರುತ್ತದೆ. ಹಾಗೇ ರನ್ ಕೂಡ ದಾಖಲಿಸುತ್ತಾ ಹೋಗುತ್ತಾರೆ.
ಹೀಗೆ ಭಿನ್ನ – ವಿಭಿನ್ನ ಮಾದರಿಯ ನಾಯಕತ್ವದ ಉಭಯ ತಂಡಗಳ ಹೋರಾಟ ವನ್ನು ನೋಡಲು ಕ್ರಿಕೆಟ್ ಅಭಿಮಾನಿಗಳು ಕುತೂಹಲದಿಂದ ಎದುರು ನೋಡುತ್ತಿದ್ದಾರೆ.








