ಯಾದಗಿರಿ: ಸಂತಾನ ಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರನ್ನು ಬೆಡ್ ಮೇಲೆ ಮಲಗಿಸದೆ ನಿಷ್ಕಾಳಜಿ ತೋರಿರುವ ವೈದ್ಯರು, ಆಸ್ಪತ್ರೆಯ ಗೇಟ್, ಮೆಟ್ಟಿಲುಗಳ ಮೇಲೆ ಮಲಗಿ ಸಂಕಷ್ಟ ಎದುರಿಸುತ್ತಿದ್ದರೂ ನಿರ್ಲಕ್ಷ್ಯ ತೋರಿದ್ದಲ್ಲದೆ, ಆರೋಗ್ಯ ಇಲಾಖೆ ಸಿಬ್ಬಂದಿ ಕಣ್ಣೆತ್ತಿಯೂ ನೋಡಿಲ್ಲ.

ಈ ಘಟನೆ ನಡೆದಿರುವುದು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ. ಶಹಾಪುರ ತಾಲೂಕು ಆಸ್ಪತ್ರೆಯಲ್ಲಿ ಶನಿವಾರ ಸಂತಾನಹರಣ ಶಸ್ತ್ರ ಚಿಕಿತ್ಸೆ ಕ್ಯಾಂಪ್ ಆಯೋಜಿಸಲಾಗಿತ್ತು. ಹೀಗಾಗಿ ನೂರಾರು ಮಹಿಳೆಯರು ಬಂದು ಸಂತಾನಹರಣ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು.

ಆದರೆ, ಆಪರೇಷನ್ ಬಳಿಕ ಮಹಿಳೆಯರಿಗೆ ಸೂಕ್ತ ಬೆಡ್ ನೀಡದೇ, ನೆಲದ ಮಲಗಲೂ ಬೆಡ್‍ಶೀಟ್ ಸೇರಿದಂತೆ ಏನನ್ನೂ ನೀಡದೇ ತಮ್ಮ ಕೆಲಸ ಮುಗಿಯಿತು ಎಂದು ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳು ಕೈತೊಳೆದುಕೊಂಡು ಹೋಗಿದ್ದಾರೆ. ಪುಟ್ಟ ಪುಟ್ಟ ಹಸು ಕಂದಮ್ಮಗಳನ್ನು ಮಡಿಲಲ್ಲಿ ಕಟ್ಟಿಕೊಂಡ ಮಹಿಳೆಯರು ಆಸ್ಪತ್ರೆಯ ಗೇಟ್ ಹಾಗೂ ಕಾರಿಡಾರ್‍ನಲ್ಲಿ ಬರಿ ನೆಲದ ಮೇಲೆ ರಾತ್ರಿಯಿಡಿ ನರಳಾಡಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ಅಧಿಕಾರಿಗಳು, ವೈದ್ಯರ ವಿರುದ್ಧ ಹಿಡಿಶಾಪ ಹಾಕಿದ್ದಾರೆ.

ಮಹಿಳೆಯರ ನರಳಾಟ ಕಂಡು ಕಾಣದೆ ಓಡಾಡುತ್ತಿದ್ದ ಆರೋಗ್ಯ ಸಿಬ್ಬಂದಿಯನ್ನು ಸಂಬಂಧಿಕರು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಸಂದರ್ಭದಲ್ಲಿ ಆರೋಗ್ಯ ಸಿಬ್ಬಂದಿ ಹಾಗೂ ಮಹಿಳೆಯರ ಸಂಬಂಧಿಕರ ನಡುವೆ ಮಾತಿನ ಚಕಮಕಿಯೇ ನಡೆದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಬಡವರಿಗೆ ಯಾವುದೇ ಸೌಲಭ್ಯ ಸಿಗುವುದಿಲ್ಲ ಎಂಬ ಆರೋಪಕ್ಕೆ ಯಾದಗಿರಿ ಜಿಲ್ಲೆಯ ಶಹಪುರ ಸರ್ಕಾರಿ ಆಸ್ಪತ್ರೆ ಜ್ವಲಂತ ನಿದರ್ಶನವಾಗಿದೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








