ಬಿಜೆಪಿಯ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಪರಿಣಾಮ, ಪಕ್ಷದ ಹೈಕಮಾಂಡ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿದೆ. ಈ ನಿರ್ಧಾರ ಹೊರಬಿದ್ದ ಬೆನ್ನಲ್ಲೇ, ರಾಜ್ಯ ಬಿಜೆಪಿ ಶಿಸ್ತು ಮುಖ್ಯ ಎಂಬ ಸಂದೇಶ ನೀಡಿದೆ.
ಹಿರಿಯ ನಾಯಕ ಡಿವಿ ಸದಾನಂದ ಗೌಡ ಈ ನಿರ್ಧಾರವನ್ನು ಸಮರ್ಥಿಸಿ, ಯಾರು ಶಿಸ್ತು ಮೀರುತ್ತಾರೋ, ಅವರಿಗೆ ತಕ್ಕ ಶಿಕ್ಷೆ ದೊರಕುತ್ತದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಯತ್ನಾಳ್ ಅವರ ವಿರುದ್ಧ ಕ್ರಮ ಕೈಗೊಂಡಂತೆ, ವಿಜಯೇಂದ್ರ ಬಣಕ್ಕೂ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ರಾಜ್ಯ ಬಿಜೆಪಿ ಪಕ್ಷವನ್ನು ಬ್ಯಾಲೆನ್ಸ್ ಮಾಡಬೇಕು, ಪಕ್ಷ ಸಂಘಟನೆಯಲ್ಲಿ ಹಿನ್ನಡೆಯಾಗುತ್ತಿದೆ, ಹೈಕಮಾಂಡ್ ತಕ್ಷಣವೇ ಸರಿಯಾದ ನಿರ್ಧಾರ ತೆಗೆದುಕೊಂಡಿದೆ ಎಂದು ಗುಡುಗಿದ್ದಾರೆ.
ಲಿಂಗಾಯತ ಸಮಾವೇಶದ ಹಿಂದೆ ಯಾರಿದ್ದಾರೆ? ಎಂಬ ಪ್ರಶ್ನೆಯನ್ನು ಎತ್ತಿರುವ ಅವರು, ಇದನ್ನು ನಡೆಸುವವರ ಬಗ್ಗೆ ಎಲ್ಲರಿಗೂ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ. ವಿಜಯೇಂದ್ರ ಕಾರ್ಯಶೈಲಿ ಕುರಿತು ನಾನು ಬಹಿರಂಗವಾಗಿ ಮಾತನಾಡಲ್ಲ, ಆದರೆ ಹೈಕಮಾಂಡ್ ಈಗಲೇ ಸೂಕ್ತ ಪಾಠ ಕಲಿಸುತ್ತಿದೆ ಎಂಬ ಸಂದೇಶ ರವಾನಿಸಿದ್ದಾರೆ.
ರಾಜ್ಯ ಬಿಜೆಪಿ ಬಣ ರಾಜಕಾರಣದಿಂದ ದಣಿದಿದೆಯಾ? ಹೈಕಮಾಂಡ್ ಈ ಬಿಕ್ಕಟ್ಟನ್ನು ಹೇಗೆ ನಿಭಾಯಿಸಲಿದೆ? ಎಂಬ ಪ್ರಶ್ನೆಗಳು ರಾಜಕೀಯ ವಲಯದಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಗಿವೆ.