ಬೆಳಗಾವಿ: ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಅನಾವರಣ ಕಾರ್ಯಕ್ರಮವು ಇತಿಹಾಸ, ಧರ್ಮ ಮತ್ತು ರಾಜಕೀಯ ಸಿದ್ಧಾಂತಗಳ ಸಂಘರ್ಷದ ಕಣವಾಗಿ ಮಾರ್ಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಅಥಣಿಯಲ್ಲಿ ನಡೆದಿದೆ. ಶಿವಾಜಿ ಮಹಾರಾಜರು ಮುಸ್ಲಿಂ ವಿರೋಧಿಯಾಗಿರಲಿಲ್ಲ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಪ್ರತಿಪಾದಿಸುತ್ತಿದ್ದಂತೆಯೇ, ನೆರೆದಿದ್ದ ಜನಸ್ತೋಮ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗುವ ಮೂಲಕ ವಿರೋಧ ವ್ಯಕ್ತಪಡಿಸಿದರು. ಇದೇ ವೇದಿಕೆಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಲಾಡ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ತಿರುಗೇಟು ನೀಡುವ ಮೂಲಕ ಕಾರ್ಯಕ್ರಮದ ಕಾವು ಹೆಚ್ಚಿಸಿದರು.
ಮೊಘಲರ ವಿರೋಧಿಗಳೇ ಹೊರತು ಮುಸ್ಲಿಮರಲ್ಲ: ಲಾಡ್ ವಾದ
ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್, ಮರಾಠ ಸಮುದಾಯ ಮತ್ತು ಶಿವಾಜಿ ಮಹಾರಾಜರ ಇತಿಹಾಸದ ಬಗ್ಗೆ ತಮ್ಮದೇ ಆದ ವ್ಯಾಖ್ಯಾನ ನೀಡಿದರು. ಮರಾಠರು ಮುಸ್ಲಿಂ ವಿರೋಧಿ ಎಂಬ ಹಣೆಪಟ್ಟಿಯನ್ನು ನಾವೇ ಕಟ್ಟಿಕೊಂಡಿದ್ದೇವೆ. ವಾಸ್ತವದಲ್ಲಿ ನಾವು ಮೊಘಲರ ವಿರುದ್ಧ ಹೋರಾಡಿದ್ದೆವೇ ಹೊರತು, ಇಡೀ ಮುಸ್ಲಿಂ ಸಮುದಾಯದ ವಿರೋಧಿಗಳಾಗಿರಲಿಲ್ಲ. ಶಿವಾಜಿ ಮಹಾರಾಜರನ್ನು ಯಾರೂ ಮುಸ್ಲಿಂ ವಿರೋಧಿ ಎಂದು ಕರೆಯಬಾರದು ಮತ್ತು ಇತಿಹಾಸದ ಬಗ್ಗೆ ಸುಳ್ಳು ಹೇಳಬಾರದು ಎಂದು ಮನವಿ ಮಾಡಿದರು.
ಲಾಡ್ ಅವರು ಈ ಮಾತುಗಳನ್ನು ಹೇಳುತ್ತಿದ್ದಂತೆಯೇ, ಸಭಿಕರ ಸಾಲಿನಿಂದ ಜೈ ಶ್ರೀರಾಮ್ ಘೋಷಣೆಗಳು ಜೋರಾಗಿ ಕೇಳಿಬಂದವು. ಆದರೂ ಮಾತು ಮುಂದುವರಿಸಿದ ಲಾಡ್, ಮರಾಠ ಸಮುದಾಯದ ರಾಜಕೀಯ ಪ್ರಾತಿನಿಧ್ಯದ ಬಗ್ಗೆ ಅಸಮಾಧಾನ ಹೊರಹಾಕಿದರು. ಎಲ್ಲರೂ ಮರಾಠರ ಬಗ್ಗೆ ಮಾತನಾಡುತ್ತಾರೆ, ಆದರೆ ಗ್ರಾಮ ಪಂಚಾಯಿತಿಯಿಂದ ಹಿಡಿದು ಉನ್ನತ ಸ್ಥಾನಗಳವರೆಗೆ ಯಾರೂ ಸಮುದಾಯಕ್ಕೆ ಟಿಕೆಟ್ ನೀಡುವುದಿಲ್ಲ ಎಂದು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು.
ಯತ್ನಾಳ್ ವಾಗ್ದಾಳಿ: ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು
ಸಚಿವ ಲಾಡ್ ಅವರ ಭಾಷಣದ ನಂತರ ವೇದಿಕೆ ಏರಿದ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ತಮ್ಮ ಉದ್ರಿಕ್ತ ಭಾಷಣದ ಮೂಲಕ ಲಾಡ್ ಹೇಳಿಕೆಯನ್ನು ಕಟುವಾಗಿ ಅಲ್ಲಗಳೆದರು. ಶಿವಾಜಿ ಮಹಾರಾಜರ ಪುತ್ರ ಸಂಭಾಜಿ ಮಹಾರಾಜರ ಮೇಲೆ ಮುಸ್ಲಿಂ ಸುಲ್ತಾನರು ನಡೆಸಿದ ದೌರ್ಜನ್ಯವನ್ನು ಎಳೆಎಳೆಯಾಗಿ ಬಿಚ್ಚಿಟ್ಟ ಯತ್ನಾಳ್, ಇತಿಹಾಸ ಸುಳ್ಳಲ್ಲ ಎಂದು ವಾದಿಸಿದರು.
ಶಿವಾಜಿ ಮಹಾರಾಜರು ಇಲ್ಲದಿದ್ದರೆ ನಮ್ಮೆಲ್ಲರ ಸುನ್ನತಿ ಆಗುತ್ತಿತ್ತು. ಬಸನಗೌಡ ಪಾಟೀಲ್ ಆಗಿರುವ ನಾನು ಬಷೀರ್ ಅಹ್ಮದ್ ಆಗಬೇಕಾಗುತ್ತಿತ್ತು. ಹಿಂದೂ ಧರ್ಮ ಉಳಿಯಲು ಶಿವಾಜಿ ಮಹಾರಾಜರೇ ಕಾರಣ ಎಂದು ಯತ್ನಾಳ್ ಗುಡುಗಿದರು. ವಿಜಯಪುರದಲ್ಲಿ ಶಿವಾಜಿ ಪ್ರತಿಮೆ ಸ್ಥಾಪಿಸುವುದು ಸುಲಭದ ಮಾತಲ್ಲ, ಏಕೆಂದರೆ ಅಲ್ಲಿ ಪಾಕಿಸ್ತಾನ ಮೇಡ್ ಮನಸ್ಥಿತಿಯವರು ಬಹಳಷ್ಟಿದ್ದಾರೆ ಎಂದು ಕಿಡಿಕಾರಿದರು.
ಉರ್ದು ಬೋರ್ಡ್ ಕಿತ್ತೊಗೆಯುವ ತಾಕತ್ ಇದೆಯೇ?
ಭಾಷಾ ವಿವಾದದ ಬಗ್ಗೆಯೂ ಪ್ರಸ್ತಾಪಿಸಿದ ಯತ್ನಾಳ್, ಮರಾಠಿ ಭಾಷೆಯನ್ನು ವಿರೋಧಿಸುವವರು ಉರ್ದು ಭಾಷೆಯನ್ನು ಏಕೆ ವಿರೋಧಿಸುವುದಿಲ್ಲ? ಉರ್ದು ಎಲ್ಲಿಯ ಭಾಷೆ? ಮರಾಠಿ ಬೋರ್ಡ್ ಬಗ್ಗೆ ಮಾತನಾಡುವವರಿಗೆ ತಾಕತ್, ಧಮ್ ಇದ್ದರೆ ಉರ್ದು ಬೋರ್ಡ್ ಗಳನ್ನು ತೆಗೆಸಲಿ ಎಂದು ಸವಾಲು ಹಾಕಿದರು. ದೇಶದ್ರೋಹಿಗಳ ರುಂಡ ಕಡಿಯುವ ಕೆಲಸವಾಗಬೇಕು, 2028ಕ್ಕೆ ನಾವೆಲ್ಲರೂ ಯೋಗಿ ಆದಿತ್ಯನಾಥ್ ಮಾದರಿಯಲ್ಲಿ ಆಡಳಿತ ನಡೆಸಬೇಕಿದೆ ಎಂದು ಕರೆ ನೀಡಿದರು.
ದ್ವೇಷ ಭಾಷಣ ಕಾಯ್ದೆ ತರುವವರೇ ಮೊದಲು ಜೈಲಿಗೆ ಹೋಗುತ್ತಾರೆ
ರಾಜ್ಯ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ದ್ವೇಷ ಭಾಷಣ (Hate Speech) ವಿಧೇಯಕದ ಬಗ್ಗೆಯೂ ಯತ್ನಾಳ್ ವ್ಯಂಗ್ಯವಾಡಿದರು. ದ್ವೇಷ ಭಾಷಣ ಮಾಡಿದರೆ ಏಳು ವರ್ಷ ಜೈಲಿಗೆ ಹಾಕುತ್ತಾರಂತೆ. ಈ ಕಾಯ್ದೆ ತರುವವರೇ ಮೊದಲು ಜೈಲಿಗೆ ಹೋಗಲಿದ್ದಾರೆ. ನಾನು ಜೈಲಿಗೆ ಹೋದರೂ, ಅಲ್ಲಿಂದ ಹೇಗೆ ಹೊರಗೆ ಬರಬೇಕು ಎಂಬುದು ನನಗೆ ಚೆನ್ನಾಗಿ ಗೊತ್ತಿದೆ ಎಂದು ಶಾಸಕ ಯತ್ನಾಳ್ ಸವಾಲು ಹಾಕಿದರು.
ಶಿವಾಜಿ ಪ್ರತಿಮೆ ಅನಾವರಣ ಕಾರ್ಯಕ್ರಮವು ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವಿನ ಸೈದ್ಧಾಂತಿಕ ಸಂಘರ್ಷಕ್ಕೆ ಸಾಕ್ಷಿಯಾಯಿತು.








