ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯ ನಿರ್ಧಾರ ಬಿಜೆಪಿಯೊಳಗೇ ಭಾರೀ ಸಂಚಲನ ಸೃಷ್ಟಿಸಿದೆ. ಈಗಾಗಲೇ ಕೆಲವು ನಾಯಕರು ಯತ್ನಾಳ್ ಪರ ಬ್ಯಾಟಿಂಗ್ ಮಾಡುತ್ತಿದ್ದು, ಈ ನಿರ್ಧಾರವನ್ನು ಮರುಪರಿಶೀಲನೆ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ.
ನಾನು ದೆಹಲಿಗೆ ಹೋಗಿ ಒತ್ತಡ ಹಾಕುತ್ತೇನೆ – ಶ್ರೀರಾಮುಲು
ಬಿಜೆಪಿ ಹಿರಿಯ ನಾಯಕ ಶ್ರೀರಾಮುಲು ಯತ್ನಾಳ್ ಉಚ್ಚಾಟನೆಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಈ ನಿರ್ಧಾರವನ್ನು ಮತ್ತೆ ಪರಿಶೀಲನೆ ಮಾಡಬೇಕಾಗಿದೆ ಎಂದು ಹೇಳಿದ್ದಾರೆ. ನನಗೆ ಅವಕಾಶ ಸಿಕ್ಕರೆ, ದೆಹಲಿಗೆ ಹೋಗಿ ವರಿಷ್ಠರನ್ನು ಭೇಟಿ ಮಾಡಿ, ಮರುಪರಿಶೀಲನೆಗಾಗಿ ಒತ್ತಡ ತರುವೆ ಎಂದು ಹೇಳಿದ್ದಾರೆ. ಪಂಚಮಸಾಲಿ ಸಮುದಾಯದ ಪ್ರಭಾವಿ ನಾಯಕನಾದ ಯತ್ನಾಳ್ ಅವರ ಉಚ್ಚಾಟನೆ ಬಗ್ಗೆ ಮೋದಿ ಮತ್ತು ಅಮಿತ್ ಶಾ ಪುನರ್‌ಪರಿಶೀಲನೆ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಯತ್ನಾಳ್ ಮತ್ತೆ ಬಿಜೆಪಿಗೆ ಬರುತ್ತಾರೆ – ಜಾರಕಿಹೊಳಿ ಭವಿಷ್ಯವಾಣಿ
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಅವರು ಯತ್ನಾಳ್ ಮತ್ತೆ ಬಿಜೆಪಿಗೆ ಹಿಂತಿರುಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಉಚ್ಚಾಟನೆಯ ಯತ್ನ ಒಂದು ತಿಂಗಳ ಹಿಂದೆಯೇ ಆರಂಭವಾಗಿತ್ತು, ನಮಗೆ ಇದರ ಬಗ್ಗೆ ಹಿಂದೆಯೇ ಮಾಹಿತಿ ಇತ್ತು. ನಿನ್ನೆ ರಾತ್ರಿ ಹೈಕಮಾಂಡ್ ಜೊತೆ ಮಾತಾಡಿದ್ದೇನೆ. ಯತ್ನಾಳ್ ಪಕ್ಷಕ್ಕಾಗಿ ಬಹಳಷ್ಟು ದುಡಿದಿದ್ದಾರೆ. ಇಂತಹ ನಿರ್ಧಾರ ವಿರೋಧಿ ಬಣಕ್ಕೂ ಎಚ್ಚರಿಕೆಯ ಗಂಟೆಯಾಗಿದೆ ಎಂದು ಜಾರಕಿಹೊಳಿ ಹೇಳಿದ್ದಾರೆ.
ನಾವು ಪಕ್ಷಕ್ಕಿಂತ ದೊಡ್ಡವರು ಅಲ್ಲ – ಸಿ.ಟಿ. ರವಿ
ಬಿಜೆಪಿ ಹಿರಿಯ ನಾಯಕ ಸಿ.ಟಿ. ರವಿ ಈ ಕುರಿತು ಪ್ರತಿಕ್ರಿಯೆ ನೀಡಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ನನ್ನ ಒಡನಾಟ ನಾಲ್ಕು ದಶಕಗಳದು. ಅವರನ್ನು ಆರು ವರ್ಷಗಳ ಕಾಲ ಪಕ್ಷದಿಂದ ಹೊರ ಹಾಕಿರುವುದು ದುರಾದೃಷ್ಟಕರ ಎಂದು ಹೇಳಿದ್ದಾರೆ. ಪಕ್ಷದಲ್ಲಿ ಎಲ್ಲರೂ ಒಟ್ಟಿಗೆ ಹೋಗುವ ವಾತಾವರಣ ಸೃಷ್ಟಿಯಾದರೆ, ಅದನ್ನು ಸ್ವಾಗತಿಸುವಲ್ಲಿ ನಾನೇ ಮೊದಲಿಗನಾಗುತ್ತೇನೆ ಎಂದಿದ್ದಾರೆ.
ಬಿಜೆಪಿಯೊಳಗೆ ಯತ್ನಾಳ್ ಉಚ್ಚಾಟನೆಯ ನಿರ್ಧಾರಕ್ಕೆ ಭಾರೀ ವಿರೋಧ ವ್ಯಕ್ತವಾಗುತ್ತಿದ್ದು, ಕೆಲವು ನಾಯಕರು ಈ ತೀರ್ಮಾನ ಪುನರ್‌ಪರಿಶೀಲನೆ ಆಗಬೇಕೆಂದು ಒತ್ತಾಯಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಯತ್ನಾಳ್ ಪಕ್ಷಕ್ಕೆ ಮರಳುವ ಸಾಧ್ಯತೆ ಇದೆಯಾ? ಎಂಬುದು ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.








