ಯಡಿಯೂರಪ್ಪರಿಗೆ ಸಂಧ್ಯಾ ಕಾಲವಿದು, ಸಿಎಂ ಬದಲಾವಣೆ ಖಚಿತ : ವಿಶ್ವನಾಥ್
ಮೈಸೂರು : ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಖಚಿತ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಬೆಂಕಿ ಬಿರುಗಾಳಿಯನ್ನ ಎಬ್ಬಿಸಿದೆ.ಜುಲೈ 26 ರಂದು ಬಿ.ಎಸ್.ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸುದ್ದಿ ಹರಿದಾಡುತ್ತಿದೆ.
ಈ ಬಗ್ಗೆ ಮೈಸೂರಿನಲ್ಲಿ ಎಂಎಲ್ ಸಿ ಹೆಚ್ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಬದಲಾವಣೆ ಆಗುತ್ತದೆ ಎಂದು ದೆಹಲಿಯೇ ಹೇಳುತ್ತಿದೆ.
ದೆಹಲಿ ಹೈಕಮಾಂಡ್ ಏನು ಹೇಳುತ್ತಿದೆಯೋ ಅದನ್ನೇ ನಾವು ಹೇಳುತ್ತಿದ್ದೇವೆ. ಸಿಎಂ ಬದಲಾವಣೆ ಖಚಿತ ಎಂದು ಸುದ್ದಿಸಂಸ್ಥೆಗೆ ಹೇಳಿದ್ದಾರೆ.
ಇನ್ನು ಆಡಿಯೋ ವಿಚಾರವಾಗಿ ಮಾತನಾಡಿ, ಇದು ಸಹಜ. ಎಲ್ಲ ರಾಜಕೀಯ ಪಕ್ಷಗಳಲ್ಲೂ ಈ ರೀತಿಯ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಬಿಜೆಪಿಯಲ್ಲಿಯೂ ಇದೆ ಅಷ್ಟೇ.
ಇದು ಕರ್ನಾಟಕ ರಾಜ್ಯದ ಆಡಳಿತ, ಅಭಿವೃದ್ಧಿ ಹಾಗೂ ಭಾರತೀಯ ಜನತಾ ಪಾರ್ಟಿಯ ಮುಂದಿನ ಭವಿಷ್ಯಕ್ಕೆ ಒಳ್ಳೆಯದಾಗುವ ದೃಷ್ಟಿಯಿಂದ ಈ ಪ್ರಕ್ರಿಯೆ ನಡೆಯುತ್ತಿದೆ.
ಯಡಿಯೂರಪ್ಪರಿಗೆ ಸಂಧ್ಯಾ ಕಾಲವಿದು. ಈ ಕಾಲದಲ್ಲಿ ಅವರು ಸಾರ್ವಜನಿಕವಾಗಿ ಹಾಗೂ ರಾಜಕೀಯವಾಗಿ ಗೌರವಯುತವಾಗಿ ವಿದಾಯ ಹೇಳಬೇಕು, ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ. ಸಿಎಂ ಬದಲಾವಣೆ ಖಂಡಿತವಾಗಿ ಆಗೇ ಆಗುತ್ತದೆ ಎಂದು ಪುನರುಚ್ಚರಿಸಿದರು.