ಬಳ್ಳಾರಿ: ಕೊರೊನಾ ಸಂದರ್ಭದಲ್ಲಿ ಬಿಜೆಪಿ ಸರ್ಕಾರ ಅಧಿಕಾರವಿದ್ದಾಗ ಅಂದಿನ ಸಿಎಂ ಯಡಿಯೂರಪ್ಪ ಹಾಗೂ ಆರೋಗ್ಯ ಸಚಿವ ಶ್ರೀರಾಮುಲು ಕೋಟಿ ಕೋಟಿ ಲೂಟಿ ಮಾಡಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಜಿಲ್ಲೆಯ ಮೆಟ್ರಿಕಿ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಸಂಡೂರು ವಿಧಾನಸಭಾ ಕ್ಷೇತ್ರವು ಕಾಂಗ್ರೆಸ್ ನ ಭದ್ರಕೋಟೆ. ಬಿಜೆಪಿ ಬಡವರಿಗೆ ಮೋಸ ಮಾಡುವ ಪಕ್ಷ. ಆದರೆ, ಕಾಂಗ್ರೆಸ್ ಯಾವಾಗಲೂ ಬಡವರ ಪರ ನಿಂತ ಪಕ್ಷ. ನೆಹರು, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಕಾಲದಿಂದಲೂ ಬಡವರ ಪರ ಇರುವ ಸರ್ಕಾರ. ಭಾರತ ದೇಶ ಆಹಾರದಲ್ಲಿ ಸ್ವಾಲಂಭಿ ಆಗಿದೆ, ಅಂದ್ರೆ ಅದಕ್ಕೆ ಕಾಂಗ್ರೆಸ್ ಕಾರಣ ಎಂದು ಹೇಳಿದ್ದಾರೆ.
ಅಕ್ರಮ ಗಣಿ ಬಗ್ಗೆ ಸಂತೋಷ ಹೆಗಡೆ ವರದಿ ನೀಡಿದ ಹಿನ್ನಲೆಯಲ್ಲಿ ಪಾದಯಾತ್ರೆ ಮಾಡಿದೆ. ರಿಪಬ್ಲಿಕ್ ಆಫ್ ಬಳ್ಳಾರಿ ಎಂದು ಸಂತೋಷ ಹೆಗಡೆ ವರದಿ ನೀಡಿದ್ದರು. ಆಗ ನನ್ನ ಮೇಲೆ ಹಲ್ಲೆ ಮಾಡಲು ಬಂದರು. ನಾವು ಹೆದರದೆ ಪಾದಯಾತ್ರೆ ಮಾಡಿದೆವು. ಆಗ ಬಳ್ಳಾರಿಯಿಂದ ಹೊರಗೆ ಹೋದವರು ಈಗ ಬಳ್ಳಾರಿಗೆ ಬಂದಿದ್ದಾರೆ. ಜನಾರ್ದನ ರೆಡ್ಡಿ ಶೋಷಣೆ ಜನರಿಗೆ ಗೊತ್ತಿದೆ. ನನ್ನ ಬಗ್ಗೆ ಮಾತನಾಡಲು ಯಾವ ಯೋಗ್ಯತೆಯೂ ಅವರಿಗೆ ಇಲ್ಲ. ಜನಾರ್ದನ ರೆಡ್ಡಿ ಒಮ್ಮೆ ಮಂತ್ರಿಯಾಗಿ ಇಡೀ ರಾಜ್ಯ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರದಲ್ಲಿದ್ದರೂ ಕಾಂಗ್ರೆಸ್ ಏನೂ ಮಾಡಿಲ್ಲ. ಕಾಂಗ್ರೆಸ್ ಅನ್ನಭಾಗ್ಯ, ಕೃಷಿ ಭಾಗ್ಯ, ಮೈತ್ರಿ, ಮನಸ್ವಿನಿ, ಮಾತೃಪೂರ್ಣ, ರೈತರ ಸಾಲ ಮನ್ನಾ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿದೆ. ಯಡಿಯೂರಪ್ಪ ಏನೂ ಕೊಟ್ಟಿಲ್ಲ, ಬರೀ ಲೂಟಿ ಮಾಡಿದ್ದಾರೆ. ಕೋವಿಡ್ ಸಂದರ್ಭದಲ್ಲಿ ಸಾವಿರಾರು ಕೋಟಿ ಲೂಟಿ ಹೊಡೆದಿದ್ದಾರೆ. ಎಷ್ಟು ಲೂಟಿ ಹೊಡೆದಿದ್ದಾರೆ ಅಂದ್ರೆ, ಹೆಣ ಹೂಳುವುದರಲ್ಲೂ ಹಣ ಲೂಟಿ ಹೊಡೆದಿದ್ದಾರೆ. ಶ್ರೀರಾಮುಲು ಆಗ ಮಂತ್ರಿ ಇದ್ದರು, ಯಡಿಯೂರಪ್ಪ ಸಿಎಂ ಆಗಿದ್ದರು. ಚೀನಾಕ್ಕೆ ಹೋಗಿ ಪಿಪಿಇ ಕಿಟ್ ತಂದು, ಕೋಟಿ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.