ಮಾತಿಗೆ ತಪ್ಪದ ಮಗ ಯಡಿಯೂರಪ್ಪ, ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ಯಡಿಯೂರಪ್ಪ- ಹೆಚ್.ವಿಶ್ವನಾಥ್
ಮೈಸೂರು, ಜೂನ್ 29: ಈ ನಾಡಿನಲ್ಲಿ ಕೊಟ್ಟ ಮಾತಿನ ಮೇಲೆ ನಂಬಿಕೆ ಉಳಿಸಿಕೊಂಡಿರುವ ನಾಯಕ ಇದ್ದರೆ ಅದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರು. ಮಾತಿಗೆ ತಪ್ಪದ ಮಗ ಯಡಿಯೂರಪ್ಪ… ಕೊಟ್ಟ ಮಾತನ್ನು ಉಳಿಸಿಕೊಳ್ಳುವ ವ್ಯಕ್ತಿ ಯಡಿಯೂರಪ್ಪ.. ಎಂದು ಮಾಜಿ ಶಾಸಕ ಹೆಚ್.ವಿಶ್ವನಾಥ್ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು ನನಗೆ ಸಚಿವ ಸ್ಥಾನ ಕೊಡಲೇ ಬೇಕು ಎಂದು ಹೇಳುತ್ತಿಲ್ಲ. ಕೊಡೋದು ಬಿಡೋದು ಅವರಿಗೆ ಬಿಟ್ಟ ವಿಚಾರ. ಆದರೆ ರಾಜಕೀಯದಲ್ಲಿನ ನನ್ನ ಅನುಭವ ಬಳಸಿಕೊಳ್ಳಿ ಎಂದು ಕೇಳುತ್ತಿದ್ದೇನೆ.
ದೇಶದ ರಾಜಕಾರಣ ನಡೆಯುವುದು ಭಾವನೆ ಮತ್ತು ನಂಬಿಕೆಗಳ ಮೇಲೆ. ಇದು ಎರಡು ಮುಗಿದರೆ ರಾಜಕಾರಣ ಇರೋದಿಲ್ಲ. ಜನನಾಯಕರು ಭಾವನೆ ಮತ್ತು ನಂಬಿಕೆಯನ್ನು ಉಳಿಸಿಕೊಳ್ಳಬೇಕಿದೆ ಎಂದು ಅವರು ಹೇಳಿದರು.
ಯಡಿಯೂರಪ್ಪನವರೇ, ನೀವು ಮಾತಿಗೆ ತಪ್ಪಿದ ಮಗನಾಗಬೇಡಿ, ಮಾತು ತಪ್ಪದ ಮಗನಾಗಿ.. ಯಡಿಯೂರಪ್ಪನವರೇ ನಾಲಿಗೆ ಮೇಲೆ ನಿಂತ ನಾಯಕನಾಗಿ, ನಾಲಿಗೆ ಕಳೆದುಕೊಂಡ ನಾಯಕನಾಗಬೇಡಿ..
ನನಗೇನು ಎಂ.ಎಲ್.ಸಿ ಅಥವಾ ಎಂ.ಎಲ್.ಎ ಸ್ಥಾನ ಕೊಟ್ಟರೆ ನನ್ನ ವ್ಯಕ್ತಿತ್ವ ಮೇಲೂ ಹೋಗಲ್ಲ, ಕೆಳಗೂ ಹೋಗಲ್ಲ. ವಿಶ್ವನಾಥ್ ಹೇಗಿದ್ದರೂ ವಿಶ್ವನಾಥ್. ಆದರೆ ನಿಮ್ಮ ಆಡಳಿತದಲ್ಲಿ ನನ್ನ ಅನುಭವವನ್ನು ಉಪಯೋಗಿಸಿಕೊಳ್ಳಿ ಎಂದು ವಿಶ್ವನಾಥ್ ಹೇಳಿದರು.