ಬೆಂಗಳೂರು: ಕಣ್ಣು, ಕಿವಿ, ಹೃದಯ ಇಲ್ಲದ ಕೇಂದ್ರ ಸರ್ಕಾರದಿಂದ ಕಿಂಚಿತ್ತೂ ಜನಪರವಾದ ನಿರ್ಣಯಗಳನ್ನು ನಿರೀಕ್ಷಿಸುವುದು ಕಷ್ಟ. ಆದರೆ ನಮ್ಮ ರಾಜ್ಯದ ಜನರ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಈ ಕೂಡಲೇ ಪೆಟ್ರೋಲ್, ಡೀಸೆಲ್ ಮೇಲಿನ ರಾಜ್ಯದ ಪಾಲಿನ ತೆರಿಗೆಯನ್ನು ಕಡಿಮೆ ಮಾಡಿ ಎಂದು ಪಕ್ಷದ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದರು.
ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಇದೇ ಹೊತ್ತಿನಲ್ಲಿ ಕಚ್ಚಾತೈಲದ ಬೆಲೆ 62 ಡಾಲರ್ ಇತ್ತು. ಈಗ 40 ಡಾಲರ್‍ಗೆ ಇಳಿದಿದೆ, ಆದರೂ ಪೆಟ್ರೋಲ್ ಬೆಲೆ 86.50, ಡಿಸೇಲ್ ಬೆಲೆ 78 ರೂಪಾಯಿ ಇದೆ. ಆದರೂ ಕೇಂದ್ರ ಸರ್ಕಾರ ಜನರ ಸುಲಿಗೆ ಮಾಡುತ್ತಿದ್ದು, ಬಾಯಲ್ಲಿ ಮಾತ್ರ ತಿನ್ನಲ್ಲ ತಿನ್ನಲು ಬಿಡುವುದಿಲ್ಲ ಎಂದು ಭಜನೆ ಮಾಡುತ್ತಿದೆ ಎಂದು ಕಿಡಿಕಾರಿದರು.
ಅರವಿಂದ ಕೇಜ್ರಿವಾಲ್ ಅವರ ನೇತೃತ್ವದ ದೆಹಲಿ ಆಮ್ ಆದ್ಮಿ ಸರ್ಕಾರ, ಕಳೆದ ಜೂನ್ ತಿಂಗಳಲ್ಲಿ ತನ್ನ ಪಾಲಿನ ತೆರಿಗೆ ಇಳಿಸಿದ ಪರಿಣಾಮ ಪೆಟ್ರೋಲ್ ಹಾಗೂ ಡಿಸೇಲ್ ಬೆಲೆ ಕ್ರಮವಾಗಿ 3.5 ರೂಪಾಯಿ ಇಳಿಕೆ ಆಗಿತ್ತು. ಇಂತಹ ಸಂಕಷ್ಟದ ಸಮಯದಲ್ಲಿ ಯಡಿಯೂರಪ್ಪ ಅವರ ನೇತೃತ್ವದ ರಾಜ್ಯ ಸರ್ಕಾರವಾದರೂ ಜನರ ನೆರವಿಗೆ ನಿಲ್ಲಬೇಕು ಎಂದು ಹೇಳಿದರು.
ಬಿಜೆಪಿಯ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಅವರು ಪೆಟ್ರೋಲನ್ನು 40 ರೂ.ಗೆ ನೀಡಬಹುದು ಎಂದು ಬಹಿರಂಗವಾಗಿಯೇ ಹೇಳಿದ್ದಾರೆ. ಅಲ್ಲದೇ ಕಚ್ಚಾತೈಲವನ್ನು ಸಂಸ್ಕರಿಸಲು ಕೇವಲ 30 ರೂಪಾಯಿ ಖರ್ಚಾಗುತ್ತದೆ ಎಂದಿದ್ದಾರೆ. ಹಾಗಾದರೆ ಸರ್ಕಾರಕ್ಕೂ ಕಳ್ಳನಿಗೂ ಏನು ವ್ಯತ್ಯಾಸ ಎಂದು ಪ್ರಶ್ನಿಸಿದರು.
ಈ ಕೂಡಲೇ ಸಿಎಂ ಯಡಿಯೂರಪ್ಪ ಅವರು ರಾಜ್ಯದ ಪಾಲಿನ ತೆರಿಗೆಯನ್ನು ಕಡಿಮೆ ಮಾಡಬೇಕು ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ಪತ್ರಿಕಾಗೋಷ್ಟಿಯಲ್ಲಿ ಪಕ್ಷದ ಮುಖಂಡ ಪ್ರಕಾಶ್ ನೆಡಂಗಡಿ ಉಪಸ್ಥಿತರಿದ್ದರು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel