ಯೆಸ್ ಬ್ಯಾಂಕ್ ಸ್ಥಾಪಕ ರಾಣಾ ಕಪೂರ್ ಅವರನ್ನು ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇಡಿ) ಭಾನುವಾರ ಮುಂಜಾನೆ ಬಂಧಿಸಿದ್ದು, ನಂತರ ಮುಂಬೈ ಕೋರ್ಟ್ ಗೆ ಹಾಜರು ಪಡಿಸಿತ್ತು.
ರಾಣಾ ಕಪೂರ್ ಪೊಲೀಸ್ ಕಸ್ಟಡಿಗೆ
ವಿಚಾರಣೆ ನಡೆಸಿದ ಕೋರ್ಟ್ ರಾಣಾ ಅವರನ್ನು ಬುಧವಾರದವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಇದೀಗ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಭ್ರಷ್ಟಾಚಾರಕ್ಕಾಗಿ ಅವರ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿ ಕೊಂಡಿದೆ.
ತನಿಖೆಗೆ ಸಹಕರಿಸಲು ನಿರಾಕರಣೆ
ಜಾರಿ ನಿರ್ದೇಶನಾಲಯ ಪರ ವಕೀಲ ಸುನಿಲ್ ಗೊನ್ಸಾಲ್ವೆಸ್ ಅವರು ಒಂದು ಗಂಟೆಗೂ ಹೆಚ್ಚು ವಕಾಲತ್ತು ಮಾಡಿ ವಿಚಾರಣೆಯಲ್ಲಿ ಆಪಾದಿತನ ಮೇಲೆ 4,300 ಕೋಟಿ ರೂ. ಭ್ರಷ್ಟಾಚಾರದ ಆರೋಪವಿದ್ದು, ತನಿಖೆಗೆ ಸಹಕರಿಸಲು ನಿರಾಕರಿಸಿದ್ದಾರೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಣಾ ನಾನು ಯಾವುದೇ ಭ್ರಷ್ಟಾಚಾರದಲ್ಲಿ ಪಾಲ್ಗೊಂಡಿಲ್ಲ, ತನಿಖೆಗೆ ಸಹಕರಿಸಿದ್ದೇನೆ. ನಿದ್ದೆ ಮಾಡದೆ ಹಗಲು ರಾತ್ರಿ ಸಹಕರಿಸಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ರಾಣಾ ಕಪೂರ್ ಪರ ವಕೀಲರು, ಬ್ಯಾಂಕ್ ವಿರುದ್ಧ ಸಾರ್ವಜನಿಕ ಆಕ್ರೋಶಕ್ಕೆ ತನ್ನ ಕಕ್ಷಿದಾರನನ್ನು ಬಲಿಪಶು ಮಾಡಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.
ಎಸ್‌ಬಿಐ ಯೆಸ್ ಬ್ಯಾಂಕಿನಲ್ಲಿ ಹೂಡಿಕೆ
ಆರ್‌ಬಿಐ ಯೆಸ್ ಬ್ಯಾಂಕ್ ಅನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡಿದ್ದು ಬ್ಯಾಂಕ್ ನ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸುವ ಯೋಜನೆಯಲ್ಲಿ ತೊಡಗಿದೆ. ಈಗಾಗಲೇ ಯೆಸ್ ಬ್ಯಾಂಕಿನಲ್ಲಿ ಶೇ 49 ರಷ್ಟು ಪಾಲನ್ನು ಖರೀದಿಸಲು ಹಣವನ್ನು ಹೂಡಿಕೆ ಮಾಡುವುದಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತಿಳಿಸಿದೆ.
ಕಳೆದ ವಾರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ದಿವಾಳಿಯಾದ ದಿವಾನ್ ಹೌಸಿಂಗ್ ಅಂಡ್ ಫೈನಾನ್ಸ್ ಲಿಮಿಟೆಡ್ (ಡಿಎಚ್‌ಎಫ್‌ಎಲ್) ಸೇರಿದಂತೆ ಇತರೆ ಸಂಸ್ಥೆಗಳಿಗೆ ಯೆಸ್ ಬ್ಯಾಂಕ್ ಸಾಲ ನೀಡಿದೆ ಎಂದು ಹೇಳಿದರು.
ಆರ್‌ಬಿಐ ಹಿಡಿತಕ್ಕೆ ಯೆಸ್ ಬ್ಯಾಂಕ್
ಕಳೆದ ಆರು ತಿಂಗಳಲ್ಲಿ ಆರ್‌ಬಿಐ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವ್ಯವಹಾರ ನಡೆಸಿದ ದಿವಾನ್ ಹೌಸಿಂಗ್, ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ ಬ್ಯಾಂಕನ್ನು ಹಿಡಿತಕ್ಕೆ ಪಡೆದಿದ್ದು ಇದೀಗ ಯೆಸ್ ಬ್ಯಾಂಕ್ ಮೂರನೇ ಮಹತ್ವದ ಬ್ಯಾಂಕ್ ಆಗಿದೆ.
ಅವ್ಯವಹಾರಕ್ಕೆ ಕಾರಣವಾಯಿತೇ ಕುಟುಂಬ ವ್ಯಾಮೋಹ
ಸಿಬಿಐ ಸಲ್ಲಿಸಿರುವ ಎಫ್‌ಐಆರ್‌ನ ಮಾಹಿತಿಯಂತೆ ನ್ಯಾಯಾಲಯಕ್ಕೆ ಭಾನುವಾರ, ಜಾರಿ ನಿರ್ದೇಶನಾಲಯದ ವಕೀಲರು ಯೆಸ್ ಬ್ಯಾಂಕ್, ದಿವಾನ್ ಹೌಸಿಂಗ್‌ನ 3,700 ಕೋಟಿ ರೂ.ಗಳ ಡಿಬೆಂಚರ್‌ಗಳನ್ನು ಖರೀದಿಸಿದ್ದು, ಇದಕ್ಕೆ ಪ್ರತಿಯಾಗಿ ದಿವಾನ್ ಹೌಸಿಂಗ್, ರಾಣಾ ಮಕ್ಕಳ ಒಡೆತನದ 40ಕೋಟಿ ರೂ. ವ್ಯವಹಾರದ ಡೊಯಿಟ್ ಅರ್ಬನ್ ವೆಂಚರ್ಸ್ ಎಂಬ ಕಂಪನಿಗೆ 700ಕೋಟಿ ರೂ ಸಾಲ ನೀಡಿತ್ತು ಎಂದು ಆರೋಪಿಸಿದ್ದಾರೆ
ಈ ನಡುವೆ ರಾಣಾ ಕಪೂರ್ ಅವರ ಪುತ್ರಿ ರೋಶನಿ, ಭಾನುವಾರ ಮುಂಬೈನಿಂದ ಲಂಡನ್’ಗೆ ತೆರಳುವುದನ್ನು ತಡೆಯಲಾಗಿದ್ದು, ರಾಣಾ ಕಪೂರ್ ರವರ ಪತ್ನಿ ಮತ್ತು ಮೂವರು ಪುತ್ರಿಯರಿಗೂ ದೇಶ ಬಿಡದಂತೆ ಸೂಚಿಸಲಾಗಿದೆ.