ಒಂದೆಡೆ ದೇಶದಲ್ಲಿ ಕೊರೊನಾ ತೀವ್ರತೆ ಹೆಚ್ಚಾಗಿದ್ದು, ಮನುಷ್ಯ ಮನುಷ್ಯನನ್ನೇ ಕಂಡರೇ ಹೆದರುವಂತಹ ಪರಿಸ್ಥಿತಿ ಎದುರಾಗಿದೆ. ಕೊರೊನಾ ಸೋಂಕಿತರನ್ನ ಕಂಡರೇ ವರ್ತನೆಯೇ ಬದಲಾಯಿಸುವಂತಾಗಿದೆ. ಇನ್ನೂ ಗುಣಮುಖರಾಗಿ ಬಂದಮೇಲೂ ಜನರು ಅವರನ್ನ ನೋಡುವ ದೃಷ್ಟಿಕೋನವೇ ಬದಲಾಗಿ ಹೋಗಿದೆ. ಅಷ್ಟರ ಮಟ್ಟಿಗೆ ಈ ದರಿದ್ರ ಕಾಯಿಲೆ ಜನರ ಮನಸ್ಥಿತಿಯನ್ನು ಬದಲಾಯಿಸಿದೆ. ಇನ್ನೂ ಕೆಲ ಪರಿಸ್ಥಿತಿಗಳಲ್ಲಿ ಜನರು ಮಾನವೀಯತೆಯನ್ನೇ ಮರೆತಿದ್ದಾರಾ ಎಂಬ ಪ್ರಶ್ನೆಗಳು ಮೂಡುವಂತಹ ಅದೆಷ್ಟೋ ಘಟನೆಗಳು ನಡೆದಿವೆ. ಹೀಗಿರುವಾಗ ಕೊರೊನಾ ಸೋಂಕಿತರಿಗೆ ಧೈರ್ಯ ತುಂಬುವ ಅವಶ್ಯಕತೆ ಹೆಚ್ಚಿದೆ. ಇದರಿಂದಾಗಿ ಅವರ ಮನೋಬಲ ಹೆಚ್ಚಾಗಿ ಮಾನಸಿಕವಾಗಿ ಕೊರೊನಾ ವಿರುದ್ಧ ಹೋರಾಡಲು ಸಾಧ್ಯತೆಯಿದೆ. ಹೀಗಾಗಿಯೇ ಐಟಿಬಿಪಿ ಸಂಸ್ಥೆ ವತಿಯಿಂದ ಕೊರೊನಾ ಸೋಂಕಿತರಿಗಾಗಿ ಯೋಗ ಕಾರ್ಯಾಗಾರವನ್ನು ನಡೆಸಲಾಗ್ತಿದೆ. ದೆಹಲಿಯ ಸರ್ದಾರ್ ವಲ್ಲಭ ಬಾಯಿ ಪಟೇಲ್ ಕೋವಿಡ್ ಸೆಂಟರ್ ನಲ್ಲಿ ಕೊರೊನಾ ಸೋಂಕಿತರಿಗಾಗಿ ವಿಸೇಷವಾಗಿ ಯೋಗ ಕಾರ್ಯಾಗಾರವನ್ನ ನಡೆಸಲಾಗ್ತಿದ್ದು, ಇದು ಸೋಂಕಿತರ ಚೇತರಿಕೆ ಪ್ರಮಾಣವನ್ನ ಹೆಚ್ಚಿಸುವಲ್ಲಿಯೂ ಅನುಕೂಲಕರವಾಗಲಿದೆ. ಈ ಆಸ್ಪತ್ರೆಯಲ್ಲಿ ೨೮೨ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.








