ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ಬೆಂಗಳೂರು, ಜುಲೈ 7: ಈಗ ಕೊರೊನಾ ಕಾಲ. ಎಲ್ಲೆಡೆಯೂ ಕೊರೊನಾದ ಬಗ್ಗೆ ಸುದ್ದಿ. ಜನರ ಪ್ರತಿಯೊಂದು ಚಿಂತನೆಯಲ್ಲೂ ಕೊರೊನಾದ ಬಗೆಗಿನ ಭಯ, ಮುನ್ನೆಚ್ಚರಿಕೆ, ಮುಂದೇನು ಎಂಬ ಆತಂಕ. ಕೊರೊನಾ ಉಂಟುಮಾಡಿರುವ ಈ ಸಂಕಷ್ಟದ ಪರಿಸ್ಥಿತಿಯಿಂದ ತಮ್ಮ ಬದುಕನ್ನು ಅರಸಿ ದೂರದೂರಿಗೆ ಹೋದವರು, ದುಡ್ಡೇ ದೊಡ್ಡಪ್ಪನೆಂದು ಹುಟ್ಟಿದೂರನ್ನು ಮರೆತವರು ತಮ್ಮೂರಿನ ಕಡೆ ಮುಖ ಮಾಡಿದ್ದಾರೆ. ಪ್ರಸ್ತುತ ಸನ್ನಿವೇಶದಲ್ಲಿ ಸುಖ ಸೌಲಭ್ಯಗಳಿಗಿಂತ ಬದುಕೇ ಹೆಚ್ಚು ಎಂಬ ಪಾಠವನ್ನು ಈ ಕೊರೊನಾ ಎಂಬ ಸಣ್ಣ ವೈರಸ್ ಮಾನವನಿಗೆ ಕಲಿಸಿದೆ ಎಂದರೆ ತಪ್ಪಾಗಲಾರದು.
ನಿರ್ದೇಶಕ, ಸಾಹಿತಿ ಯೋಗರಾಜ್ ಭಟ್ ಎಂದೋ ಬರೆದ ಈ ಕೆಳಗಿನ ಹಾಡು ಪ್ರಸ್ತುತ ಸಂದರ್ಭಕ್ಕೆ ಹೆಚ್ಚು ಸೂಕ್ತ ಎನಿಸುವಂತಿದೆ.
ಹುಟ್ಟಿದ ಊರನು ಬಿಟ್ಟು ಬಂದ ಮೇಲೆ
ಇನ್ನೇನು ಬಿಡುವುದು ಬಾಕಿ ಇದೆ..?
ಮಾಡೋದೆಲ್ಲಾ ಮಾಡಿ ಅಳಬ್ಯಾಡ ಪರದೇಸಿ
ಎದ್ದೇಳು ಕೊನೆ ಬಸ್ಸು ಟೈಮಾಗಿದೆ..!
ಊರ ದಿಕ್ಕಿನ ಗಾಳಿ ತಂದಿದೆ ಒಂದು ಕಾಣದ ಕೂಗನ್ನು,
ತವರಿಗಿಂತ ಬೆಚ್ಚನೆ ಜಾಗ ಹೇಳು ಎಲ್ಲಿದೆ ನಿಂಗಿನ್ನೂ..?
ನಿಂಗಿದೂ ಬೇಕಿತ್ತಾ ಮಗನೇ? ವಾಪಸ್ಸು ಹೊಂಟ್ಹೋಗು ಶಿವನೇ!
ಬ್ಯಾಗು ಹಿಡೀ ಸೀದಾ ನಡಿ, ಬೋರ್ಡು ನೋಡೀ ಬಸ್ಸು ಹಿಡಿ
ಹುಟ್ಟಿದ ಊರಿಗಿಂತ ಸುರಕ್ಷಿತ ಜಾಗ ಬೇರೆ ಯಾವುದು ಇಲ್ಲ ಎಂದು ಹೇಳುವ ಈ ಹಾಡಿನ ಸಾಲಿನಂತೆ ಪರದೇಶದಲ್ಲಿದ್ದ, ಪರರಾಜ್ಯಗಳಲ್ಲಿದ್ದವರು ಎಲ್ಲವನ್ನೂ ಬಿಟ್ಟು ತಮ್ಮ ಊರಿಗೆ ವಾಪಸಾಗಿದ್ದಾರೆ. ಅದೆಷ್ಟೋ ಜನ ನಗರದ ಸಹವಾಸವೇ ಬೇಡ ಎಂದು ತಮ್ಮ ಮೂಲ ಕಸುಬು ವ್ಯವಸಾಯ, ಕೃಷಿಯ ಕಡೆ ಮುಖ ಮಾಡಿದ್ದಾರೆ.
ಸ್ವತಃ ಯೋಗರಾಜ್ ಭಟ್ ಅವರೇ ಈ ಹಾಡನ್ನು ನೆನಪಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಇಂದಿಗೆ ಹೆಚ್ಚು ಪ್ರಸ್ತುತ ಎಂದು ಹೇಳಿಕೊಂಡಿದ್ದಾರೆ.
ನಾವೆಲ್ಲರೂ ಎಲ್ಲಿಂದಲೋ ಬಂದವರು
ಎಲ್ಲಿಗೋ ಹೊಂಟವರು
ಅಲ್ಲಿಂದ ಇಲ್ಲಿಗೆ
ಇಲ್ಲಿಂದ ಅಲ್ಲಿಗೆ
ಅಲ್ಲಿಂದ ಎಲ್ಲಿಗೆ..?
ಇದು ಸದಾ ಕಾಡುವ ಭಾವ..
ಎಂದೋ ಬರೆದ ಹಾಡು ಇಂದಿಗೆ ಹೆಚ್ಚು ಪ್ರಸ್ತುತ ಎಂದು ಯೋಗರಾಜ್ ಭಟ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದಿದ್ದಾರೆ.








