ಬೆಂಗಳೂರು: ಕೋವಿಡ್-19 ವಿರುದ್ಧದ ಯುದ್ಧ ಸುದೀರ್ಘವಾದುದು. ಲಾಕ್ಡೌನ್ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಲಾಕ್ಡೌನ್ ವಿಫಲವಾದರೆ ಅದಕ್ಕೆ ಮುಖ್ಯಮಂತ್ರಿಗಳನ್ನೇ ಹೊಣೆಯಾಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ಕೊರೊನಾ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ದೇಶದ ಎಲ್ಲಾ ರಾಜ್ಯದ ಸಿಎಂಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ರು. ಇದಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಲಾಕ್ಡೌನ್ ಅವಧಿಯಲ್ಲಿ ಯಾವುದೇ ಅಗತ್ಯ ವಸ್ತುಗಳ ಕೊರತೆಯಾಗದಂತೆ ನೋಡಿಕೊಳ್ಳಬೇಕೆಂದು ಪ್ರಧಾನಿ ತಿಳಿಸಿದ್ದಾಗಿ ಯಡಿಯೂರಪ್ಪ ಮಾಹಿತಿ ನೀಡಿದರು.
ಕೊರೊನಾ ವೈರಸ್ ಸೋಂಕಿತರ ಆರೈಕೆಗೆ ಪ್ರತ್ಯೇಕ ಆಸ್ಪತ್ರೆಗಳನ್ನು ಗುರುತಿಸಿ ಅಧಿಸೂಚನೆ ಹೊರಡಿಸಬೇಕು. ಮುಂದಿನ ದಿನಗಳಲ್ಲಿ ಒಂದು ವೇಳೆ ಪರಿಸ್ಥಿತಿ ವಿಷಮಿಸಿದರೆ ವೈದ್ಯರ ಕೊರತೆಯಾಗದಂತೆ ಎಚ್ಚರವಹಿಸಬೇಕು. ಆಸಕ್ತ ವೈದ್ಯರಿಗೆ ಆನ್ಲೈನ್ ತರಬೇತಿ ನೀಡಿ ಸಜ್ಜುಗೊಳಿಸಬೇಕು ಎಂದು ಪ್ರಧಾನಿ ಸೂಚಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ದೇಶ ಸುದೀರ್ಘ ಯುದ್ಧ ನಡೆಸಬೇಕಾಗಿದೆ. ಅದಕ್ಕೆ ಎಲ್ಲರ ಸಹಕಾರ ಬೇಕು ಎಂದು ಪ್ರಧಾನಿ ಹೇಳಿದ್ದಾಗಿ ಯಡಿಯೂರಪ್ಪ ನೆನಪಿಸಿಕೊಂಡರು.