ಹೈದರಾಬಾದ್ : ಯುವತಿಯೊಬ್ಬಳು 24 ಗಂಟೆಯಲ್ಲಿ ಎರಡು ಮದುವೆಯಾಗಿರುವ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯ ಕನಗಲ್ ಪ್ರದೇಶದಲ್ಲಿ ನಡೆದಿದೆ. ಶಾಬ್ದುಲ್ಲಾಪುರ ಗ್ರಾಮದ ಮೋನಿಕಾ ಪೋಷಕರ ಸಮ್ಮುಖದಲ್ಲೇ ಎರಡು ಮದುವೆಯಾಗಿದ್ದು, ಎರಡನೇ ಮದುವೆಯ ಮೂಲಕ ತನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದಾಳೆ.
ಹೌದು..!
ನಲ್ಗೊಂಡ ಜಿಲ್ಲೆ ಕುರಂಪಲ್ಲಿಯಲ್ಲಿ ವಾಸವಿದ್ದ ಮೋನಿಕಾಗೆ ದೇವರಕೊಂಡ ಗ್ರಾಮದ ಯುವಕನೊಂದಿಗೆ ಮದುವೆ ನಿಶ್ಚಯವಾಗಿ ಹತ್ತಿರ ಸಂಬಂಧಿಗಳು ಮತ್ತು ಹಿರಿಯರ ಸಮ್ಮುಖದಲ್ಲಿ ಸರಳವಾಗಿ ವಿವಾಹ ನಡೆದಿದೆ. ಸಂಪ್ರದಾಯದಂತೆ ವಿವಾಹದ ಬಳಿಕ ವದುವರರು ಹಿರಿಯರ ಕಾಲಿಗೆ ಬಿದ್ದು ಆಶೀರ್ವಾದ ಪಡೆದುಕೊಳ್ಳುತ್ತಿದ್ದರು. 
ಈ ವೇಳೆ ಅಲ್ಲಿಗೆ ಮೋನಿಕಾಳ ಗೆಳೆಯ ರಾಜೇಶ್ ಬಂದಿದ್ದಾನೆ. ಆತನನ್ನು ನೋಡಿದ ತಕ್ಷಣ ಮೋನಿಕಾ ಓಡಿ ಹೋಗಿ ತಬ್ಬಿಕೊಂಡು ಕಣ್ಣೀರು ಹಾಕಿದ್ದಾಳೆ. ಇದನ್ನು ನೋಡಿ ಕೋಪಗೊಂಡ ವರ ನನಗೆ ಮೋಸ ಆಗಿದೆ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾನೆ.
ಇತ್ತ ಮೋನಿಕಾ, ನನಗೆ ರಾಜೇಶ್ ಬೇಕೆಂದು ಪಟ್ಟಹಿಡಿದಿದ್ದಾಳೆ. ಅಂದ್ಹಾಗೆ ರಾಜೇಶ್ ಸಂಬಂಧದಲ್ಲಿ ಮೋನಿಕಾಳಿಗೆ ಮಾವ ಆಗಬೇಕು. ಇವರಿಬ್ಬರು ಕೆಲವು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಮೋನಿಕಾ ಹೆದರಿಕೊಂಡು ತನ್ನ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿರಲಿಲ್ಲ.
ಇನ್ನು ತನಗೆ ಅನ್ಯಾಯ ಆಗಿದೆ ಎಂದ ಠಾಣೆ ಮೆಟ್ಟಿಲೇರಿದ್ದ ವರ, ಮೋನಿಕಾ ಹಾಗೂ ರಾಜೇಶ್ ಕುಟುಂಬಗಳ ಹಿರಿಯರ ವಿರುದ್ಧ ದೂರು ನೀಡಿದ್ದಾನೆ. ದೂರಿನ ಅನ್ವಯ ಎರಡು ಕುಟುಂಬಗಳ ಹಿರಿಯರನ್ನು ಪೊಲೀಸರು ಠಾಣೆಗೆ ಕರೆಸಿದ್ದಾರೆ. ನಂತರ ಪೊಲೀಸರು ಎಲ್ಲರೂ ಕುಳಿತುಕೊಂಡು ಒಂದು ಬಾರಿ ಮಾತನಾಡಿ ಎಂದು ಹೇಳಿದ್ದಾರೆ. ಅದರಂತೆ ಗ್ರಾಮದಲ್ಲಿ ಈ ಬಗ್ಗೆ ಪಂಚಾಯಿತಿ ನಡೆದಿದ್ದು, ಎಲ್ಲರೂ ತೀರ್ಮಾನ ಮಾಡಿ ಹಿರಿಯರು ಮತ್ತು ಪೋಷಕರು ನಡೆದಿದ್ದ ಮದುವೆಯನ್ನು ರದ್ದು ಮಾಡಿದ್ದಾರೆ. ಇದೇ ವೇಳೆ ರಾಜೇಶ್ ಜೊತೆ ಮೋನಿಕಾಳ ವಿವಾಹ ಮಾಡಲು ನಿರ್ಧರಿಸಿದ್ದಾರೆ. ಅಂತಿಮವಾಗಿ ಮೋನಿಕಾ ತಾನು ಪ್ರೀತಿಸಿದ ಹುಡುಗನ ಜೊತೆ ಪೋಷಕರ ಮುಂದೆಯೇ ಮತ್ತೆ ಮದುವೆಯಾಗಿದ್ದಾಳೆ.








