ಚಿಕ್ಕಬಳ್ಳಾಪುರ: ಕೆಲಸ ಬಿಟ್ಟಿದ್ದಕ್ಕೆ ಮನೆಯವರು ಬುದ್ಧಿ ಹೇಳಿದ್ದಾರೆ. ಇದಕ್ಕೆ ಮನನೊಂದು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಮಾಡೇಶ್ವರ ಗ್ರಾಮದ ಹೊರವಲಯದಲ್ಲಿ ನಡೆದಿದೆ. ಕೈಯಲ್ಲಿದ್ದ ಕೆಲಸ ಬಿಟ್ಟ ಮೇಲೆ ಬೈಕ್ ನ ಇಎಂಐ ಹೇಗೆ ಕಟ್ಟುತ್ತೀಯಾ? ಎಂದು ತಂದೆ-ತಾಯಿ ಬುದ್ಧಿ ಹೇಳಿದ್ದಕ್ಕೆ ನಿಖಿಲ್ (25) ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗಿದೆ.
ನಿಖಿಲ್ ಖಾಸಗಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಆದರೆ, ಇತ್ತೀಚೆಗೆ ಕೆಲಸ ಬಿಟ್ಟು ಹಸು ಮೇಯುಸುತ್ತಿದ್ದ. ಅಲ್ಲದೇ ಇತ್ತೀಚೆಗಷ್ಟೇ ಸಾಲ ಮಾಡಿಕೊಂಡು ಬೈಕ್ ಕೂಡ ಖರೀದಿಸಿದ್ದ. ಕೆಲಸ ಬಿಟ್ಟಿದ್ದಕ್ಕೆ ಕುಟುಂಬಸ್ಥರು ಬೇಸರಗೊಂಡಿದ್ದರು. ಈ ಸಂದರ್ಭದಲ್ಲೇ ಬೈಕ್ ಯಾಕೆ ತಗೊಂಡೆ? ಅದರ ಅವಶ್ಯಕೆ ಏನಿತ್ತು? ಕೆಲಸ ಬೇರೆ ಇಲ್ಲ. ಇಎಂಐ ಹೇಗೆ ಕಟ್ಟುತ್ತೀಯಾ? ಎಂದು ಬುದ್ಧಿ ಹೇಳಿದ್ದರು.
ಇದರಿಂದ ಬೇಸತ್ತ ನಿಖಿಲ್, ಹಸು ಮೇಯಿಸಲು ಹೋಗಿದ್ದ ಸಂದರ್ಭದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ತನಿಖೆ ನಡೆಸುತ್ತಿದ್ದಾರೆ.








