ಮೂಡುಬಿದಿರೆ ; ಕೊರೊನಾ ವೈರಸ್ ಭೀತಿಯಿಂದ ಯುವಕನೊಬ್ಬ ಕ್ವಾರಂಟೈನ್ ಆಗಿದ್ದ ಶಾಲೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ತಾಲೂಕಿನ ಕಡಂದಲೆಯಲ್ಲಿ ನಡೆದಿದೆ.
ಮೃತ ವ್ಯಕ್ತಿ ಕಡಂದಲೆಯ ನಿವಾಸಿ ಎಂದು ಹೇಳಲಾಗುತ್ತಿದ್ದು, ಮುಂಬೈಯಲ್ಲಿ ಹೋಟೆಲ್ ಕೆಲಸದಲ್ಲಿದ್ದರು ಎಂದು ತಿಳಿದುಬಂದಿದೆ. ಮೃತ ಯುವಕ ಬುಧವಾರ ರಾತ್ರಿ ಇಬ್ಬರು ಸಹೋದರರ ಜೊತೆಗೆ ಮೂಡುಬಿದಿರೆಗೆ ಬಂದಿದ್ದರು. ಊರಿಗೆ ಬಂದವರನ್ನು ತಡರಾತ್ರಿ ಕಡಂದಲೆ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು. ಆದರೆ ಮುಂಜಾನೆ 3 ಗಂಟೆಯ ಹೊತ್ತಿಗೆ ಶಾಲೆಯ ಪಕ್ಕಾಸಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸದ್ಯ ಮೃತದೇಹವನ್ನು ಕೊರೊನಾ ಪರೀಕ್ಷೆಗಾಗಿ ಕೊಂಡೊಯ್ಯಲಾಗಿದೆ. ಈ ಶಾಲೆಯಲ್ಲಿ ಇನ್ನೂ ಹಲವರು ಕ್ವಾರಂಟೈನ್ ನಲ್ಲಿದ್ದು, ಅವರನ್ನು ಬೇರೆ ಕಡೆ ಸ್ಥಳಾಂತರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಉಪವಿಭಾಗಧಿಕಾರಿ ಮದನ ಮೋಹನ್ ಸಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.