ಯುವಕನೊಬ್ಬ ಇಬ್ಬರು ಪ್ರೇಯಸಿಯರಿಂದ ಕೊಲೆಯಾಗಿರುವ ಘಟನೆ ನಡೆದಿದೆ.
ಉತ್ತರ ಪ್ರದೇಶದ ಅಂಬೇಡ್ಕರ್ ನಗರ ಜಿಲ್ಲೆಯಲ್ಲಿ ಯುವಕನೊಬ್ಬನನ್ನು ಆತನ ಇಬ್ಬರು ಪ್ರೇಯಸಿಯರು ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಕಬ್ಬಿನ ಗದ್ದೆಗೆ ಕರೆದೊಯ್ದ ಆತನ ಇಬ್ಬರು ಪ್ರೇಯಸಿಯರು ಅಲ್ಲಿ ಚೀನಾ ಟಾರ್ಚ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದು ಪ್ರೇಮ ಪ್ರಕರಣ ಎಂಬುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪೊಲೀಸರು ಆಳವಾಗಿ ತನಿಖೆ ನಡೆಸಿದಾಗ ಯುವಕನನ್ನು ಆತನ ಇಬ್ಬರು ಗೆಳತಿಯರೇ ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ. ಸದ್ಯ ಆರೋಪಿಗಳನ್ನು ಬಂಧಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೃತ ಯುವಕ ಸಂದೀಪ್ ಚೌಹಾಣ್, ಗ್ರಾಮದ ಇಬ್ಬರು ಯುವತಿಯರೊಂದಿಗೆ ಪ್ರೇಮ ಸಂಬಂಧ ಹೊಂದಿದ್ದ. ಪ್ರೀತಿಸುವುದಾಗಿ ತಮ್ಮಿಬ್ಬರನ್ನೂ ನಂಬಿಸಿ, ಮೋಸ ಮಾಡಿರುವುದು ಆ ಯುವತಿಯರಿಗೆ ಗೊತ್ತಾಗಿದೆ. ಅಲ್ಲದೇ, ಇಬ್ಬರನ್ನೂ ಆತ ಬ್ಲಾಕ್ ಮೇಲ್ ಮಾಡುತ್ತಿದ್ದ ಎನ್ನಲಾಗಿದೆ. ಬ್ಲ್ಯಾಕ್ ಮೇಲ್ ನಿಂದ ನೊಂದಿದ್ದ ಇಬ್ಬರೂ ಕೊಲ್ಲಲು ಯೋಜನೆ ರೂಪಿಸಿದ್ದರು. ಹೀಗಾಗಿ ಕಬ್ಬಿನ ಗದ್ದೆಯಲ್ಲಿ ಭೇಟಿಯಾಗಲು ಇಬ್ಬರೂ ಯುವತಿಯರು ಸಂದೀಪ್ಗೆ ಕರೆ ಮಾಡಿದ್ದರು.
ಸಂದೀಪ್ ಅಲ್ಲಿಗೆ ಬಂದಾಗ ಇಬ್ಬರೂ ಸೇರಿ ಚೈನೀಸ್ ಟಾರ್ಚ್ ನಿಂದ ತಲೆಗೆ ಹೊಡೆದು ಹತ್ಯೆ ಮಾಡಿದ್ದಾರೆ. ಆನಂತರಶವವನ್ನು ಅದೇ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಸಂದೀಪ್ ನ ಬ್ಲ್ಯಾಕ್ಮೇಲ್ನಿಂದ ಬೇಸತ್ತು ಈ ಕ್ರಮ ಕೈಗೊಂಡಿರುವುದಾಗಿ ಯುವತಿಯರು ತಪ್ಪೊಪ್ಪಿಕೊಂಡಿದ್ದಾರೆಂದು ಪೊಲೀಸರು ಹೇಳಿದ್ದಾರೆ.








