ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಯೂನಿಸ್ ಖಾನ್ ನೇಮಕ…!
ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ. ಅದ್ಭುತ ಪ್ರತಿಭೆಗಳನ್ನು ಹೊಂದಿರುವ ತಂಡವಾದ್ರೂ ಆಟಗಾರರ ನಡುವಿನ ಒಳಜಗಳ, ಪಾಕ್ ಕ್ರಿಕೆಟ್ ಮಂಡಳಿಯ ರಾಜಕೀಯ, ಹಿರಿಯ ಕ್ರಿಕೆಟಿಗರ ಕಡಗಣನೆ ಹೀಗೆ ಸಾಕಷ್ಟು ಸಮಸ್ಯೆ, ಸವಾಲುಗಳನ್ನು ಪಾಕ್ ಕ್ರಿಕೆಟ್ ಎದುರಿಸುತ್ತಿತ್ತು. ಇದೀಗ ಪಾಕ್ ಕ್ರಿಕೆಟ್ ಮಂಡಳಿಯು ಕೆಲವೊಂದು ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದೆ.
ಆಗಸ್ಟ್ ಮತ್ತು ಸೆಪ್ಟಂಬರ್ ನಲ್ಲಿ ಪಾಕಿಸ್ತಾನ ಇಂಗ್ಲೆಂಡ್ ವಿರುದ್ಧ ತಲಾ ಮೂರು ಟೆಸ್ಟ್ ಪಂದ್ಯಗಳ ಸರಣಿ ಹಾಗೂ ಟಿ-ಟ್ವೆಂಟಿ ಪಂದ್ಯಗಳ ಸರಣಿಯನ್ನು ಆಡಳಿದೆ. ಈ ಹಿನ್ನೆಲೆಯಲ್ಲಿ ಪಾಕ್ ತಂಡವನ್ನು ಬಲಿಷ್ಠಗೊಳಿಸಲು ಪಿಸಿಬಿ ಸಾಕಷ್ಟು ಪ್ರಯತ್ನಗಳನ್ನು ನಡೆಸುತ್ತಿದೆ. ಈ ಹಿಂದೆಯೇ ಪಾಕ್ ತಂಡಕ್ಕೆ ಮಿಸ್ಬಾ ಉಲ್ ಹಕ್ ಅವರನ್ನು ಹೆಡ್ ಕೋಚ್ ಆಗಿ ನೇಮಕ ಮಾಡಿತ್ತು. ಹಾಗೇ ವೇಗದ ಬೌಲಿಂಗ್ ಕೋಚ್ ಆಗಿ ವಕಾರ್ ಯೂನಸ್ ಅವರು ಆಯ್ಕೆಯಾಗಿದ್ದರು. ಇವರೊಂದಿಗೆ ಇದೀಗ ಯೂನಿಸ್ ಖಾನ್ ತಂಡದ ಬ್ಯಾಟಿಂಗ್ ಕೋಚ್ ಹಾಗೂ ಮಷ್ತಾಕ್ ಅಹ್ಮದ್ ಅವರನ್ನು ಸ್ಪಿನ್ ಬೌಲಿಂಗ್ ಕೋಚ್ ಆಗಿ ನೇಮಕ ಮಾಡಿದೆ. ಹೀಗಾಗಿ ಪಾಕ್ ಕ್ರಿಕೆಟ್ ತಂಡಕ್ಕೆ ಈಗ ಮಾಜಿ ಕ್ರಿಕೆಟಿಗರ ಅನುಭವ ಹಾಗೂ ಮಾರ್ಗದರ್ಶನ ಸಿಗಲಿದೆ.
ಯೂನಿಸ್ ಖಾನ್ ಅವರು 2017ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದ್ದರು. 118 ಟೆಸ್ಟ್ ಪಂದ್ಯಗಳನ್ನು ಆಡಿರುವ ಯೂನಿಸ್ ಖಾನ್ ಅವರು 10099ರನ್ ಗಳಿಸಿದ್ದಾರೆ. ಅದು ಅಲ್ಲದೆ ಇಂಗ್ಲೆಂಡ್ ವಿರುದ್ಧ ಯೂನಿಸ್ ಖಾನ್ ಅವರ
ದಾಖಲೆಯೂ ಉತ್ತಮವಾಗಿದೆ. ಮತ್ತೊಂದೆಡೆ ಮಷ್ತಾಕ್ ಅಹ್ಮದ್ ಅವರು 52 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಸ್ಪಿನ್ ಬೌಲಿಂಗ್ ಜೊತೆಗೆ ತಂಡದ ಮೆಂಟರ್ ಆಗಿಯೂ ಕಾರ್ಯನಿರ್ವಹಿಸಬೇಕಿದೆ.
ಯೂನಿಸ್ ಖಾನ್ ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿ ಕಾರ್ಯನಿರ್ವಹಿಸಲು ಒಪ್ಪಿಕೊಂಡಿದ್ದಾರೆ. ದೇಶ ಮತ್ತು ಪಾಕ್ ಕ್ರಿಕೆಟ್ ತಂಡದ ಯಶಸ್ಸಿಗೆ ಯೂನಿಸ್ ಖಾನ್ ಬದ್ಧರಾಗಿರುತ್ತಾರೆ. ಅವಕಾಶಕ್ಕಾಗಿ ಅವರು ಕಾಯುತ್ತಿದ್ದರು ಎಂದು ಪಾಕ್ ಕ್ರಿಕೆಟ್ ಮಂಡಳಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸೀಮ್ ಖಾನ್ ಹೇಳಿದ್ದಾರೆ.
ಇನ್ನು ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯೂನಿಸ್ ಖಾನ್, ಇದು ನನಗೆ ಸಿಕ್ಕ ದೊಡ್ಡ ಗೌರವ. ನನ್ನ ದೇಶವನ್ನು ಪ್ರತಿನಿಧಿಸುತ್ತಿರುವುದು ಹೆಮ್ಮೆಯ ಸಂಗತಿ. ತಂಡಕ್ಕಾಗಿ ಮತ್ತೆ ಸೇವೆ ಮಾಡಲು ಅವಕಾಶ ಸಿಕ್ಕಿರುವುದು ನನ್ನ ಅದೃಷ್ಟ. ಹಾಗೇ ಇಲ್ಲಿ ಸಾಕಷ್ಟು ಸವಾಲುಗಳಿವೆ. ಇಂಗ್ಲೆಂಡ್ ಸರಣಿಯನ್ನು ನಾನು ಕಾತರದಿಂದ ಎದುರುನೋಡುತ್ತಿದ್ದೇನೆ ಎಂದಿದ್ದಾರೆ,








