ಬ್ಯಾಟಿಂಗ್ ಸಲಹೆ ನೀಡಿದ್ದಾಗ ಯೂನಿಸ್ ಖಾನ್ ಚೂರಿ ತೋರಿಸಿದ್ದರು- ಗ್ರ್ಯಾಂಟ್ ಫ್ಲವರ್ ಆರೋಪ
ಪಾಕಿಸ್ತಾನದ ಮಾಜಿ ಬ್ಯಾಟಿಂಗ್ ಕೋಚ್ ಹಾಗೂ ಜಿಂಬಾಬ್ವೆಯ ಮಾಜಿ ಆಟಗಾರ ಗ್ರ್ಯಾಂಟ್ ಫ್ಲವರ್ ಅವರು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಯೂನಿಸ್ ಖಾನ್ ಮೇಲೆ ಭಾರೀ ಆರೋಪವೊಂದನ್ನು ಮಾಡಿದ್ದಾರೆ. 2016ರ ಬ್ರಿಸ್ಬೇನ್ ನಡೆದಿದ್ದ ಟೆಸ್ಟ್ ಪಂದ್ಯದ ಬ್ರೇಕ್ ಟೈಮ್ ನಲ್ಲಿ ಯೂನಿಸ್ ಖಾನ್ ತನ್ನ ಗಂಟಲಿಗೆ ಚೂರಿ ಹಿಡಿದಿದ್ದರು ಎಂದು ಗ್ರ್ಯಾಂಟ್ ಫ್ಲವರ್ ಅಪವಾದ ಮಾಡಿದ್ದಾರೆ.
ಖಾಸಗಿ ಕಾರ್ಯಕ್ರಮವೊಂದರಲ್ಲಿ ಗ್ರ್ಯಾಂಟ್ ಫ್ಲವರ್ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಟೆಸ್ಟ್ ಸರಣಿಯು ಬ್ರಿಸ್ಬೇನ್ ನಲ್ಲಿ ನಡೆಯುತ್ತಿತ್ತು. ಮೊದಲ ಇನಿಂಗ್ಸ್ ನಲ್ಲಿ ಯೂನಿಸ್ ಖಾನ್ ಶೂನ್ಯಕ್ಕೆ ಔಟಾಗಿದ್ರು. ಹಾಗೇ ಎರಡನೇ ಇನಿಂಗ್ಸ್‍ನಲ್ಲಿ ಯೂನಿಸ್ ಖಾನ್ ಬ್ರೇಕ್ ಟೈಮ್ ನಲ್ಲಿ ಬಂದಾಗ ನಾನು ಅವರಿಗೆ ಬ್ಯಾಟಿಂಗ್ ಸಲಹೆಯನ್ನು ನೀಡಿದ್ದೆ. ಇದಕ್ಕೆ ಪ್ರತಿಯಾಗಿ ಯೂನಿಸ್‍ಖಾನ್ ಚೂರಿಯನ್ನು ತನ್ನ ಗಂಟಲಿನ ಮೇಲೆ ಹಿಡಿದಿದ್ದರು. ಆಗ ನಾನು ಗಲಿಬಿಲಿಗೊಂಡಿದ್ದೆ. ಪಕ್ಕದಲ್ಲಿ ಕೂತಿದ್ದ ಮಿಕ್ಕಿ ಆರ್ಥರ್ ಅವರು ಮಧ್ಯೆ ಪ್ರವೇಶ ಮಾಡಿದ್ದರು ಎಂದು ಗ್ರ್ಯಾಂಟ್ ಫ್ಲವರ್ ಹೇಳಿದ್ದಾರೆ.
ಆದ್ರೆ ಗ್ರ್ಯಾಂಟ್ ಫ್ಲವರ್ ಅವರ ಈ ಹೇಳಿಕೆಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ. ಹಾಗೇ ಯೂನಿಸ್ ಖಾನ್ ಕೂಡ ಸ್ಪಷ್ಟನೇ ನೀಡಿಲ್ಲ. ಯೂನಿಸ್ ಖಾನ್ ಅವರು ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿದ್ದಾರೆ. ಯೂನಿಸ್ ಖಾನ್ ಪಾಕ್ ತಂಡದ ಬ್ಯಾಟಿಂಗ್ ಕೋಚ್ ಆಗಿದ್ದಾರೆ.
ಆದ್ರೆ ಈ ಘಟನೆ ತಮಾಷೆಯಾಗಿ ನಡೆದಿರುವುದು ಅನ್ನೋ ಮಾಹಿತಿಯೂ ಇದೆ. ಇದೊಂದು ಹಾಸ್ಯದ ಸನ್ನಿವೇಶ ಆಗಿತ್ತು. ಗ್ರ್ಯಾಂಟ್ ಫ್ಲವರ್ ಅವರು ಯೂನಿಸ್ ಖಾನ್ ತಿಂಡಿ ತಿನ್ನುವಾಗ ಬ್ಯಾಟಿಂಗ್ ಸಲಹೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಯೂನಿಸ್ ಖಾನ್, ತಿಂಡಿ ತಿನ್ನುವಾಗ ಸಲಹೆ ನೀಡಬೇಡಿ ಅಂತ ಬೆಣ್ಣೆ ಹಚ್ಚುವ ಚೂರಿಯನ್ನು ಫ್ಲವರ್‍ಗೆ ತೋರಿಸಿದ್ದರು ಎಂಬ ಮಾಹಿತಿಯೂ ಇದೆ.
ಅಂದ ಹಾಗೇ ಈ ಪಂದ್ಯದಲ್ಲಿ ಯೂನಿಸ್ ಖಾನ್ ಅವರು ಎರಡನೇ ಇನಿಂಗ್ಸ್ ನಲ್ಲಿ 65 ರನ್ ದಾಖಲಿಸಿದ್ರೆ, ಕೊನೆಯ ಟೆಸ್ಟ್ ಪಂದ್ಯ ಸಿಡ್ನಿಯಲ್ಲಿ ನಡೆದಿದ್ದು ಅದ್ರಲ್ಲಿ ಅಜೇಯ 175 ರನ್ ದಾಖಲಿಸಿದ್ದರು.