ಕೊರೊನಾ ಲಾಕ್ ಡೌನ್ ಹಿನ್ನೆಲೆ ಬಡವರ ಬದುಕು ಬೀದಿ ಪಾಲಾಗಿದೆ.. ಇಂತಹ ಬಡವರಿಗಾಗಿ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಇದರ ಮಧ್ಯೆ ಸಂಘ ಸಂಸ್ಥೆಗಳು, ಉದ್ಯಮಿಗಳು ಸಹ ಬಡವರಿಗಾಗಿ ಸಹಾಯ ಹಸ್ತ ಚಾಚಿದ್ದಾರೆ. ಇದೀಗ ಲಾಕ್ ಡೌನ್ ಇಂದಾಗಿ ದೆಹಲಿಯಲ್ಲಿ ತೊಂದರೆಗೆ ಸಿಲುಕಿಕೊಂಡಿರುವ ಕನ್ನಡಿಗರಿಗೆ ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷರೂ ಮತ್ತು ಕನ್ನಡಿಗರೂ ಆದ ಬಿ.ವಿ. ಶ್ರೀನಿವಾಸ್ ಅವರು ನೆರವಿನ ಹಸ್ತ ಚಾಚಿದ್ದಾರೆ.
ದೆಹಲಿಯ ಆರ್.ಕೆ. ಪುರಂನ 6ನೇ ಸೆಕ್ಟರ್ ಮತ್ತು ಲಜಪತ್ ನಗರದಲ್ಲಿ ನೆಲಸಿರುವ ಕರ್ನಾಟಕದ ಕ್ಷಯ ರೋಗಪೀಡಿತ ಕುಟುಂಬಗಳು ಮತ್ತು ಬಡ ಕುಟುಂಬಗಳಿಗೆ ಬಿ.ವಿ. ಶ್ರೀನಿವಾಸ್ ಅವರು ಅಕ್ಕಿ, ಗೋದಿ, ಸಕ್ಕರೆ, ಅಡುಗೆ ಎಣ್ಣೆ ಮತ್ತಿತರ ಅಗತ್ಯ ಸಾಮಗ್ರಿಗಳನ್ನು ವಿತರಿಸಿದ್ದಾರೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಲಾಕ್ ಡೌನ್ ಸಮಯದಲ್ಲಿ ಯಾರೂ ಹಸಿವಿನ ನೋವನ್ನು ಅನುಭವಿಸಬಾರದು. ಯಾರೊಬ್ಬರೂ ಹಸಿವಿನಿಂದ ಸಾಯುವಂತಾಗಬಾರದು. ಇಂಥ ಕಷ್ಟಕಾಲದಲ್ಲಿ ನೆರವಾಗುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ. ನಾನು ಕೂಡ ಈ ಸಂದರ್ಭದಲ್ಲಿ ನನ್ನ ಕರ್ತವ್ಯ ನಿರ್ವಹಿಸುತ್ತಿದ್ದೇನೆ ಎಂದು ಹೇಳಿದರು.








