ಕಾರವಾರ: ಡೆಂಗ್ಯೂ ಜ್ವರದ ಆತಂಕ ಮತ್ತೆ ಶುರುವಾಗಿದ್ದು, ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಬಲಿಯಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಮಾವಿನಕುರ್ವ ಪಂಚಾಯ್ತಿ ವ್ಯಾಪ್ತಿಯ ತಲಗೋಡು ಗ್ರಾಮದಲ್ಲಿನ ಪ್ರಜ್ವಲ್ ಗೋವಿಂದ ಕಾರ್ವಿ (24) ಸಾವನ್ನಪ್ಪಿದ ಯುವಕ ಎನ್ನಲಾಗಿದೆ. ಈ ಯುವಕ ಸಾಗರಶ್ರೀ ಬೋಟ್ ನಲ್ಲಿ ಮೀನುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ. ಆದರೆ, ಕಳೆದ ಒಂದು ವಾರದಿಂದ ಜ್ವರದಿಂದ ಬಳಲುತ್ತಿದ್ದ. ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಾಗ ಡೆಂಗ್ಯೂ ಇರುವುದು ಪತ್ತೆಯಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.
ಭಟ್ಕಳದ ಬಂದರಿನಲ್ಲಿ ಮೀನುಗಾರಿಕೆ ವೃತ್ತಿ ಮಾಡುತ್ತಿರುವ ಮತ್ತಿಬ್ಬರಿಗೆ ಡೆಂಗ್ಯೂ ಜ್ವರ ಕಾಣಿಸಿಕೊಂಡಿದ್ದು, ಅವರು ಕೂಡ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿ ಮತ್ತಷ್ಟು ಆತಂಕ ಶುರುವಾಗಿದೆ.