ದಕ್ಷಿಣ ಕನ್ನಡ : ಲಾಕ್ ಡೌನ್ ಹಿನ್ನೆಲೆ ರಾಜ್ಯದ ಹಲವರು ನೆರೆಯ ರಾಜ್ಯಗಳಲ್ಲಿ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಅದರಂತೆ ಪುತ್ತೂರಿನ ಇಬ್ಬರು ಯುವಕರು ಗುಜರಾತ್ ನಲ್ಲಿ ಸಿಲುಕಿದ್ದು, ಕಳೆದ 21 ದಿನಗಳಿಂದ ತಮ್ಮ ಕಾರಿನಲ್ಲಿಯೇ ಉಳಿದುಕೊಂಡಿದ್ದಾರೆ. ವೃತ್ತಿಯಲ್ಲಿ ಅಡಕೆ ಸುಫಾರಿ ವ್ಯಾಪಾರಿಗಳಾಗಿ ಕೆಲಸ ನಿರ್ವಹಿಸುತ್ತಿದ್ದ ಪುತ್ತೂರಿನ ಯುವಕರಿಬ್ಬರು ಕಳೆದ 21 ದಿನಗಳಿಂದ ಗುಜರಾತ್ ನ ಚೆಕ್ ಪೋಸ್ಟ್ ಬಳಿ ಕಾರೊಂದರಲ್ಲಿ ಅನಾಥ ಬದುಕು ಸಾಗಿಸುತ್ತಿದ್ದಾರೆ.
ಪುತ್ತೂರಿನ ಸಾಮೆತ್ತಡ್ಕ ನಿವಾಸಿ ಆಶಿಕ್ ಹುಸೈನ್ ಹಾಗೂ ಕೆಮ್ಮಿಂಜೆ ಗ್ರಾಮದ ನಿವಾಸಿ ಮೊಹಮ್ಮದ್ ತಾಕೀನ್ ಮರೀಲ್ ಎಂಬ ಈ ಯುವಕರು ಇದೀಗ ತಮ್ಮ ದಿನದ ಬಹುಭಾಗವನ್ನು ಕಾರಿನೊಳಗೆಯೇ ಕಳೆಯುತ್ತಿದ್ದಾರೆ. ಈ ನಡುವೆ ಸ್ಥಳೀಯರ ಸಹಾಯದಿಂದ ಊಟೋಪಚಾರ ದೊರೆತಿದ್ದರೂ ಊರಿಗೆ ಬರಲಾಗದೆ ಕಾಲ ಕಳೆಯುವಂತಾಗಿದೆ. ಸದ್ಯ ಈ ಪ್ರಕರಣ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಗಮನ ಸೆಳೆದಿದ್ದು, ಈ ಇಬ್ಬರೂ ಯುವಕರಿಗೆ ಊಟದ ವ್ಯವಸ್ಥೆಯೂ ಸೇರಿ ಸೂಕ್ತ ವಸತಿ ಒದಗಿಸುವಂತೆ ಗುಜರಾತ್ ನ ವೆಲ್ಸಾಡ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.








