Yuvraj Singh Birthday | ಯುವಿ ಗೆದ್ದಿದ್ದು ಎರಡಲ್ಲ.. ನಾಲ್ಕು ವಿಶ್ವಕಪ್..!
ಯುವಿ ನಿನ್ನ ಆಟಕ್ಕೊಂದು ಸಣ್ಣ ಋಣ ಸಂದಾಯ!
ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಇಂದು ತಮ್ಮ 39ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ಅದ್ಭುತ ಆಟಗಾರನಿಗೆ ಕ್ರಿಕೆಟ್ ದಿಗ್ಗಜರು ಶುಭಕೋರುತ್ತಿದ್ದಾರೆ.
ಯುವರಾಜ್ ಸಿಂಗ್ 1981 ಡಿಸೆಂಬರ್ 12ರಂದು ಜನಿಸಿದ್ದು, ತಂದೆಯೇ ಅವರ ಮೊದಲ ಕೋಚ್. ತಂದೆಯಿಂದ ಕ್ರಿಕೆಟ್ ನ ಅಕ್ಷರಗಳನ್ನು ಕಲಿತ ಯುವಿಗೆ ಇಂದು ಇಡೀ ಕ್ರಿಕೆಟ್ ಜಗತ್ತು ಸಲಾಂ ಎನ್ನುತ್ತಿದೆ.
ಅಭೂತಪೂರ್ವ ಬ್ಯಾಟಿಂಗ್ ವೈಭವ, ಚಾಕಚಕ್ಯತೆಯ ಫೀಲ್ಡಿಂಗ್, ಕೆಲವೊಮ್ಮೆ ಆರನೆಯ ಪರಿಣಿತ ಬೌಲರ್ ಆಗಿ ಮಿಂಚಿ ಭರಪೂರ ಮನೋರಂಜನೆ ಕೊಟ್ಟ ಯುವಿಗೆ ಇದೊಂದು ಸಣ್ಣ ಋಣ ಸಂದಾಯ.
ಡಿಯರ್ ಯುವಿ,
ನೀವು ಭಾರತ ಕ್ರಿಕೆಟ್ ತಂಡಕ್ಕೆ ಪದಾರ್ಪಣೆ ಮಾಡಿದ ಪಂದ್ಯವಿನ್ನೂ ನೆನಪಿದೆ. ಅದು ನೈರೋಬಿಯಲ್ಲಿ ನಡೆದ ಆಸ್ಟ್ರೇಲಿಯ ವಿರುದ್ಧದ ಪಂದ್ಯ. ಸಚಿನ್, ಸೌರವ್, ದ್ರಾವಿಡ್ ವಿಕೆಟ್ ಉದುರಿದ ಭಾರತದ ಬ್ಯಾಟಿಂಗ್ ಕಥೆಯೇ ಮುಗಿಯುತ್ತದೆ ಎನ್ನುವಂತಿದ್ದ ಕಾಲದಲ್ಲಿ, ಕ್ರೀಸಿಗೆ ಬಂದ ನೀವು 12 ಬೌಂಡರಿ ಸಹಿತ 84 ರನ್ ಚಚ್ಚಿದ್ರಿ. ಆಡಿದ ಮೊದಲ ಪಂದ್ಯದಲ್ಲೇ ಪ್ಲೇಯರ್ ಆಫ್ ದ ಮ್ಯಾಚ್. ಭಾರತದ ಮಧ್ಯಮ ವರ್ಗದ ಬೆನ್ನುಮೂಳೆ ಗಟ್ಟಿಯಾದ ದಿನವದು. ಅಂದು ನಿಮ್ಮ ಬ್ಯಾಟಿಂಗ್ ಅಬ್ಬರವನ್ನು ಕೂಲಂಕುಷವಾಗಿ ನೋಡಿದ ದಾದಾ ನಿಮ್ಮ ಭವ್ಯ ಭವಿಷ್ಯವನ್ನು ಊಹಿಸಿದ್ದರೆಂದು ಕಾಣಿಸುತ್ತದೆ ನೋಡಿ. ಅದರಾಚೆಗೆ ಹೆಜ್ಜೆ ಹೆಜ್ಜೆಗೂ ನಿಮ್ಮನ್ನು ಸೌರವ್ ದಾದಾ ಬಿಟ್ಟುಕೊಡಲೇ ಇಲ್ಲ. ನೀವು ಫಾರಮ್ ಕಳೆದುಕೊಂಡಾಗಲೂ ಸೌರವ್ ಬಾಯ್ ನಿಮ್ಮ ಪರವಾಗಿಯೇ ಬ್ಯಾಟಿಂಗ್ ಮಾಡಿ ಉಳಿಸಿಕೊಂಡರು.
ಪ್ರಾಯಶಃ ಈ ಸಂಗತಿಯಂತೂ ಕ್ರಿಕೆಟ್ ಜಗತ್ತಿನ ಬಹುತೇಕ ಅಭಿಮಾನಿಗಳಿಗೆ ಮರೆತುಹೋಗಿದೆ. ನೀವು ಪ್ರತಿನಿಧಿಸಿದ್ದ ಅಂಡರ್ 15 ಟೀಮ್ 1996ರಲ್ಲಿ ವಿಶ್ವ ಕಪ್ ಮುಡಿಗೇರಿಸಿಕೊಂಡಾಗ ಸರಣಿ ಶ್ರೇಷ್ಠರಾಗಿದ್ದು ನೀವು. 2000ರಲ್ಲಿ ಅಂಡರ್ 19 ವಿಶ್ವ ಕಪ್ ಪಂದ್ಯಾವಳಿಯಲ್ಲೂ ಭಾರತ ವಿಶ್ವ ಚಾಂಪಿಯನ್ ಆದಾಗಲೂ ಮ್ಯಾನ್ ಆಫ್ ದ ಸೀರಿಸ್ ನೀವೇ. 2007ರಲ್ಲಿ ಧೋನಿ ನೇತೃತ್ವದ ಟೀಂ ಇಂಡಿಯಾ ಟಿ-20 ವಿಶ್ವಕಪ್ ಗೆದ್ದಾಗಲೂ ಬೆಸ್ಟ್ ಪ್ಲೇಯರ್ ಆಫ್ ದಿ ಸೀರಿಸ್ ಒನ್ಸ್ ಎಗೈನ್ ನೀವೇ. ಇನ್ನು ನೀವು ಬಾಲ್ಯದಿಂದಲೂ ಆರಾಧಿಸಿಕೊಂಡು ಬಂದ ಕ್ರಿಕೆಟ್ ದೇವರು ಸಚಿನ್ ಗಾಗಿ ವಿಶ್ವಕಪ್ ಗೆಲ್ಲುತ್ತೇವೆ ಎಂದು ವಿಶ್ವಕ್ಕೆ ಸಾರಿದವರು ನೀವು. 2011ರಲ್ಲಿ ನೀವು ಗೈದ ಶಪಥದಂತೆ ವಿಶ್ವಕಪ್ ಮುಡಿಗೇರಿಸಿಕೊಂಡಿತು ಭಾರತ. ಆಗಲೂ ಸೀರಿಸ್ ಕಿರೀಟ ಧರಿಸಿಕೊಂಡಿದ್ದು ನನ್ ಆದರ್ ದ್ಯಾನ್ ನೀವೇ. ನೀವು ಚಾಂಪಿಯನ್ ತಂಡದಲ್ಲಿದ್ದ ಅಸಲಿ ಚಾಂಪಿಯನ್. ನೀವು ಮಿಂಚಿದ್ದೆಲ್ಲವೂ ದೊಡ್ಡ ದೊಡ್ಡ ಟೂರ್ನಮೆಂಟ್ ಗಳೇ.
ವಿದೇಶಿ ನೆಲದಲ್ಲಿ ಬ್ಯಾಟ್ ಮಾಡಲು ಭಾರತೀಯ ಬ್ಯಾಟ್ಸ್ ಮನ್ ಗಳು ತಿಣುಕಾಡುವ ಸ್ಥಿತಿ ಇದ್ದಾಗ ನೀವು ಮಾತ್ರ ಇಂಗ್ಲೆಂಡ್, ಕಿವೀಸ್, ಆಸಿಸ್, ಕೆರಿಬಿಯನ್ ನಾಡಿನಲ್ಲಿ ಲೀಲಾಜಾಲವಾಗಿ ಬ್ಯಾಟ್ ಬೀಸುತ್ತಿದ್ರಿ. ನಿಮ್ಮಲ್ಲಿದ್ದ ಅಗ್ರೆಷನ್ ಅನ್ನು ನಿಮ್ಮ ಬ್ಯಾಟಿನಿಂದ ಬಡಿಸಿಕೊಂಡ ಯಾವುದಾದರೂ ಬೌಲರ್ ಮರೆಯಲು ಸಾಧ್ಯವುಂಟಾ? ನೀವೊಬ್ಬ ಇಗೋಯಿಸ್ಟಿಕ್. ನಿಮ್ಮ ಇಗೋ ಹರ್ಟ್ ಆದಾಗಲೆಲ್ಲಾ ಬೌಲರ್ ಗಳ ಮಾರಣ ಹೋಮ ನಡೆದಿದೆ. ಇಂಗ್ಲೆಂಡ್ ವಿರುದ್ಧದ ನ್ಯಾಟ್ ವೆಸ್ಟ್ ಸೀರಿಸ್ ನ ಅಂತಿಮ ಪಂದ್ಯ ಮರೆಯಲು ಸಾಧ್ಯವೇ ಆವತ್ತೂ ನೀವು ರೊಚ್ಚಿಗೆದ್ದಿದ್ರಿ. ಟಿ -20 ವಲ್ರ್ಡ್ ಕಪ್ ನ ಇಂಗ್ಲೆಂಡ್ ವಿರುದ್ಧದ ಮುಖಾಮುಖಿಯಲ್ಲಿ ನೀವು ಸ್ಟುವರ್ಟ್ ಬ್ರಾಡ್ ಗೆ ಆರೂ ಬಾಲ್ ಗಳನ್ನೂ ಸಿಕ್ಸರ್ ಸಿಡಿಸಿದ್ದೂ ಸಹ ನಿಮ್ಮ ಇಗೋ ಹರ್ಟ್ ಆಯ್ತು ಅನ್ನುವ ಕಾರಣಕ್ಕೆ ಅಲ್ಲವೇ? ಸ್ಲಡ್ಜಿಂಗ್ ಮೂಲಕ ಎದುರಾಳಿಗಳ ಮನೋಸ್ಥೈರ್ಯ ಕುಗ್ಗಿಸುತ್ತಿದ್ದ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ಕ್ರಿಕೆಟಿಗರನ್ನು ನೀವೇನು ಕಡಿಮೆ ಕೆಣಕುತ್ತಿದ್ರಾ? ನಿಮ್ಮ ಆತ್ಮೀಯ ಗೆಳೆಯ ಭಜ್ಜಿ – ಸೈಮಂಡ್ಸ್ ಜನಾಂಗೀಯ ನಿಂದನೆ ಘಟನೆಯ ನಂತರ ಅದೇ ಸೈಮಂಡ್ಸ್ ಗೆ ನೀವು ಬ್ಯಾಟ್ ನಿಂದ ಕೊಡುವ ಉತ್ತರದ ದಾಟಿ ಬದಲಾಗಿದ್ದು ನಾವೂ ಗಮನಿಸಿದ್ದೆವು. ಕಡೆ ಕಡೆಗೆ ನೀವು ಕ್ರೀಸ್ ನಲ್ಲಿದ್ದಾಗ ಸೈಮಂಡ್ಸ್ ಬೌಲ್ ಮಾಡುವುದನ್ನೇ ಕಡಿಮೆ ಮಾಡಿಬಿಟ್ಟ.
ಅಂತಿಮ ಹತ್ತು ಒವರ್ ಗಳಲ್ಲಿ ಕ್ರೀಸ್ ನಲ್ಲಿ ಈ ಬ್ಯಾಟ್ಸ್ ಮನ್ ಗಳಿದ್ದರೆ ಅದು ಎದುರಾಳಿಗಳ ಪಾಲಿಗೆ ಪ್ರಳಯ ತಾಂಡವ ಎನ್ನುವ ಒಂದು ಸಣ್ಣ ಪಟ್ಟಿಯನ್ನು ನಾವು ಮಾಡಿದ್ದೆವು. ಅದರಲ್ಲಿ ಎರಡನೇ ಸ್ಥಾನದಲ್ಲಿ ಆಸ್ಟ್ರೇಲಿಯಾದ ಮೈಕಲ್ ಬೆವನ್, ಮೂರನೆಯ ಸ್ಥಾನದಲ್ಲಿ ದಕ್ಷಿಣ ಆಫ್ರಿಕಾದ ಲ್ಯಾನ್ಸ್ ಕ್ಲುಸ್ನೇರ್ ಇದ್ದರೆ ಮೊದಲ ಸ್ಥಾನದಲ್ಲಿ ರಾರಾಜಿಸಿದ್ದು ನೀವು, ದ ಗ್ರೇಟ್ ಯುವರಾಜ್ ಸಿಂಗ್.
ನೀವೊಬ್ಬ ಸವ್ಯಸಾಚಿ ಎನ್ನುವುದಕ್ಕೆ ಒಂದಲ್ಲ, ಹತ್ತಲ್ಲ, ನೂರಲ್ಲ, ಸಾವಿರ ಸಾವಿರ ಉದಾಹರಣೆಗಳನ್ನು ಕೊಡಬಹುದು. ನೀವು ನಿಮ್ಮ ಮೊದಲ ಆಟೋಗ್ರಾಫ್ ಹಾಕಿದ್ದು ನಿಮ್ಮ 17ನೇ ವಯಸ್ಸಿನಲ್ಲಿ, ಅದಕ್ಕೆ ನಿಮಗೆ ಸ್ಫೂರ್ತಿ – ಪ್ರೇರಣೆ 15 ನೇ ವಯಸ್ಸಿನಲ್ಲಿ ಆಟೋಗ್ರಾಫ್ ಹಾಕಿದ ಗಾಡ್ ಆಫ್ ಕ್ರಿಕೆಟ್ ಸಚಿನ್ ಪಾಜಿ. 2008ರಲ್ಲಿ ಅದೇ ಸಚಿನ್ ಪಾಜಿಯ ಜೊತೆ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ನಲ್ಲಿ ನೀವು ಮುರಿಯದ ಐದನೇ ವಿಕೆಟ್ ಜೊತೆಯಾಟವಾಡಿ ವಿಶ್ವ ದಾಖಲೆಯ 387ರನ್ ಚೇಸ್ ಮಾಡಿ ವಿಜಯಲಕ್ಷ್ಮಿಯನ್ನು ಒಲಿಸಿಕೊಂಡ್ರಿ. “ಸಚಿನ್ ನನ್ನ ಬದುಕಿನ ಆದರ್ಶ” ಎಂದು ನೀವು ಹೇಳಿದ್ರಿ, ಆದರೆ “ನೀವೇ ನನ್ನ ಆದರ್ಶ” ಎಂದು ಅದೇ ಸಚಿನ್ ಮಗ ಅರ್ಜುನ್ ಹೇಳಿದ. ಇದಲ್ಲವೇ ನಿಮ್ಮ ಸಾಧನೆ!
ವಿಶ್ವಕಪ್ ಚರಿತ್ರೆಯಲ್ಲೇ ಪಂದ್ಯವೊಂದರಲ್ಲಿ 5 ವಿಕೆಟ್ ಕಬಳಿಸಿ, ಅರ್ಧ ಶತಕ ದಾಖಲಿಸಿದ ಮೊತ್ತ ಮೊದಲ ಕ್ರಿಕೆಟಿಗ ನೀವು. 24 ರನ್ ಗಳಿಗೆ ಮೂರು ಮಹತ್ವದ ವಿಕೆಟ್ ಕಳೆದುಕೊಂಡ ಪಂದ್ಯದಲ್ಲಿ ನಿಮ್ಮ ಹಾಗು ಧೋನಿ ಕಾಂಬಿನೇಷನ್ ನಲ್ಲಿ 350ರ ಗಡಿ ದಾಟಿದ ಇನ್ನಿಂಗ್ಸ್ ನಿಮ್ ಅಭಿಮಾನಿಗಳು ಮರೆಯಲು ಸಾಧ್ಯವೇ? ನಿಮ್ಮ 22ನೆಯ ವಯಸ್ಸಿನಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ 139 ರನ್ ಚಚ್ಚಿದ್ದ ಬ್ಯಾಟಿಂಗ್ ವೈಭವ ಸದಾ ಕಾಲ ನೆನಪಿನಲ್ಲಿ ಉಳಿಯುವಂತದ್ದು. 2007ರಲ್ಲಿ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧದ 5ನೇ ಏಕದಿನ ಪಂದ್ಯದಲ್ಲಿ ಸಿಡಿಸಿದ 105 ರನ್ ಆಗಲೀ, 2008ರಲ್ಲಿ ರಾಜಕೋಟ್ ನಲ್ಲಿ ಇಂಗ್ಲೆಂಡ್ ವಿರುದ್ಧ ಸಿಡಿಸಿದ 138 ರನ್ ಆಗಲೀ, ಟಿ-20 ವಿಶ್ವ ಸಮರದಲ್ಲಿ ಅಜೇಯ ಆಸ್ಟ್ರೇಲಿಯಾ ವಿರುದ್ಧವೇ ಕೇವಲ 30 ಎಸೆತದಲ್ಲಿ ಬಾರಿಸಿದ 70 ರನ್ ಗಳಾಗಲಿ ಮರೆಯುವುದುಂಟಾ? ಹೀಗೆ ಪಟ್ಟಿ ಮಾಡುತ್ತಾ ಹೋದರೆ ನೂರೆಂಟು ನೆನಪುಗಳ ಮೆರವಣಿಗೆ ಸಾಗಿ ಬರುತ್ತದೆ ಮಿಸ್ಟರ್ ಬೆಸ್ಟ್ ಬ್ಲಾಸ್ಟರ್.
ನಿಮ್ಮ ಅಭಿಮಾನಿಗಳು ನಿಮ್ಮನ್ನು ಪಂಜಾಬ್ ಕ ಪುತ್ತರ್ ಅಂದರು, ಶಾನ್ ಆಫ್ ಪಂಜಾಬ್ ಅಂದರು, ಸಿಂಗ್ ಈಸ್ ಕಿಂಗ್ ಅಂದರು. ಟೈಗರ್ ಆಫ್ ಮೊಹಾಲಿ ಎಂದರು. ನಿಮ್ಮ ಜನ್ಮದಿನದಂದೇ ಅದೇ ಮೊಹಾಲಿಯ ಅಂಗಳದಲ್ಲಿ ಆರ್ಭಟಿಸಿದ ಇನ್ನಿಂಗ್ಸ್ ಕೊಂಡಾಡಿದರು. ಭಾರತದ ಹಾಗೂ ಪ್ರತೀ ಕ್ರಿಕೆಟ್ ಆಡುವ ದೇಶದ ಅಂಕಣದಲ್ಲಿ ನಿಮ್ಮ ಗುರುತುಗಳನ್ನು ಹುಡುಕಿ ಅಭಿಮಾನಿಸಿದರು. ನೀವು ಸುದೀರ್ಘ ಒಂದೂಕಾಲು ದಶಕ ಕ್ರಿಕೆಟ್ ಜಗತ್ತಿನ ಸಾಮ್ರಾಟರಾಗಿ ಮೆರೆದಿರಿ. ಆಗೆಲ್ಲಾ ಪ್ರಶ್ನಾತೀತರಾಗಿದ್ರಿ, ಸ್ಥಾನ ಅಬಾಧಿತರಾಗಿದ್ರಿ ಆದರೆ ನಿಮ್ಮ ಅತಿ ರಂಜಿತ, ಶೋಭಾಯಮಾನ ಕ್ರಿಕೆಟ್ ಬದುಕನ್ನು ನುಂಗಿದ್ದು ಕೇವಲ ಎರಡೇ ಸಂಗತಿಗಳು. ಒಂದು ನಿಮ್ಮನ್ನು ಕಾಡಿದ ಅಪರೂಪದ ವ್ಯಾದಿ ಕ್ಯಾನ್ಸರ್, ಇನ್ನೊಂದು ಜಗತ್ತಿನ ಅತ್ಯಂತ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ. ನಿಮಗೊಂದು ಗೌರವಯುತ ವಿದಾಯ ಸಹ ಹೇಳಲಾರದೇ ಅಗೌರವದಿಂದ ಕಂಡ ಬಿಸಿಸಿಐ ಹೊಣೆಗೇಡಿತನಕ್ಕೊಂದು ಧಿಕ್ಕಾರವಿರಲಿ.
ಹಿಂದೊಮ್ಮೆ ನಿಮ್ಮ ಫಾರ್ಮ್ ಕೈ ಕೊಟ್ಟಾಗ ಬೆನ್ನಿಗೆ ನಿಂತು ಸಮರ್ಥಿಸಿಕೊಂಡಿದ್ದು ಸೌರವ್ ದಾದಾ ಆದರೆ ಬ್ಯಾಟಿಂಗ್ ಕೌಶಲ್ಯಗಳನ್ನು ಹೇಳಿಕೊಟ್ಟಿದ್ದು ಸಚಿನ್ ಪಾಜಿ. ಆದರೆ ಕ್ಯಾನ್ಸರ್ ಮಹಾಮಾರಿ ಗೆದ್ದು ನೀವು ಮತ್ತೆ ಕ್ರಿಕೆಟ್ ಬದುಕಿಗೆ ಕಮ್ ಬ್ಯಾಕ್ ಮಾಡಿದಾಗ ನಿಮ್ಮ ಪಾಲಿಗೆ ಈ ಇಬ್ಬರೂ ಗಾಡ್ ಫಾದರ್ ಗಳಿರಲಿಲ್ಲ ಅನ್ನುವುದು ದುರದೃಷ್ಟವಲ್ಲದೇ ಮತ್ತೇನು?
ಯಾರೇನೆ ಹೇಳಲಿ ಸೌರವ್ ದಾದಾ ನಂತರ ಅನಾಯಾಸವಾಗಿ ಸಿಕ್ಸರ್ ಬಾರಿಸುವುದನ್ನು ನಂತರದ ಕ್ರಿಕೆಟ್ ತಲೆಮಾರಿಗೆ ಹೇಳಿಕೊಟ್ಟ ಯೂನಿವರ್ಸಿಟಿ ನೀವೆಂದರೆ ತಪ್ಪಲ್ಲ. ನಿಮ್ಮ ಪ್ರತೀ ಇನ್ನಿಂಗ್ಸ್ ನಲ್ಲಿ ಬೌಂಡರಿಗಳ ಸೊಗಸಿಗಿಂತ ಉನ್ಮಾದದ ಆನಂದ ನೀಡುತ್ತಿದ್ದಿದ್ದೇ ಬಾನೆತ್ತರಕ್ಕೆ ಏರಿ ಹಾರಿ ತೂರಿ ಸ್ಟೇಡಿಯಂ ತುದಿಗೆ ಬೀಳುತ್ತಿದ್ದ ಚೆಂಡು. ಒಂದು ಕಾಲದಲ್ಲಿ ಪ್ರಪಂಚದ ಎಲ್ಲಾ ಕ್ರಿಕೆಟ್ ತಂಡಗಳ ಬೌಲರ್ ರನ್ನು ಬಸವಳಿಸಿದ ಪ್ರಚಂಡ ದಾಂಡಿಗರು ನೀವು. ಪಾಯಿಂಟ್ ಹಾಗೂ ಕವರ್ಸ್ ನಲ್ಲಿ ಕ್ಷೇತ್ರ ನಿರ್ವಹಣೆ ಮಾಡುವಾಗ ಪ್ರತೀ ಮ್ಯಾಚ್ ನಲ್ಲಿ ಕನಿಷ್ಟ 30 ರನ್ ಉಳಿಸುತ್ತಿದ್ರಿ. ನಾವು ನಿಮ್ಮನ್ನು ಭಾರತದ ಜಾಂಟಿ ರೋಡ್ಸ್ ಎಂದೇ ನೆನಪಿನಲ್ಲಿ ಉಳಿಸಿಕೊಳ್ಳುತ್ತೇವೆ. ಅನೇಕ ಪಂದ್ಯಗಳಲ್ಲಿ ಬೌಲಿಂಗ್ ನಲ್ಲೂ ಕರಾಮತ್ತು ಮಾಡಿದ ನೀವು ಭಾರತದ ಅತ್ಯುತ್ತಮ ಅಲ್ ರೌಂಡರ್ ಎನ್ನುವುದು ನಿರ್ವಿವಾದಿತ ಸತ್ಯ.
https://www.youtube.com/watch?v=OCd7WxB4QJU
ನಿಮ್ಮ ಸಿಕ್ಸರ್ ಶೈಲಿಯ ಬ್ರಾಂಡ್ ಅನ್ನೇ ಈಗಿನ ಅನೇಕರು ಅನುಸರಿಸುತ್ತಿದ್ದಾರೆ. ನಿಮ್ಮ ಹಾಗೂ ಧೋನಿಯ ನಡುವೆ ಅಪರೂಪದ ತಾಳಮೇಳವಿರುತ್ತಿತ್ತು. ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಗೆಲ್ಲಿಸಿಕೊಟ್ಟ ಹತ್ತಾರು ಮ್ಯಾಚ್ ಗಳ ಬೆಸ್ಟ್ ಫಿನಿಶರ್ ನೀವಿಬ್ಬರೇ.
ಅದೇನೆ ಇರಲಿ, ನೀವು ನಿವೃತ್ತಿಯ ನಂತರ ಕ್ಯಾನ್ಸರ್ ಪೀಡಿತ ಮಕ್ಕಳಿಗಾಗಿ ಐ ಕ್ಯಾನ್ ವಿನ್ ಚಾರಿಟಬಲ್ ಟ್ರಸ್ಟ್ ಮೂಲಕ ಮಹತ್ತರವಾದುದ್ದನ್ನು ಸಾಧಿಸಲು ಹೊರಟಿದ್ದೀರಿ. ನಮ್ಮ ದೇಶದ ಪೀಡಿತ ಬಾಧಿತ ಮಕ್ಕಳ ಕಲ್ಯಾಣಕ್ಕಾಗಿ ನೀವಿಟ್ಟ ಹೆಜ್ಜೆ ನಿಜಕ್ಕೂ ಶ್ಲಾಘನೀಯ. ನಿಮಗೆ ಶುಭವಾಗಲಿ. ನಮ್ಮ ಕಾಲಘಟ್ಟದ ಕ್ರಿಕೆಟ್ ನೆನಪುಗಳನ್ನು ಸ್ಮರಣೀಯವಾಗಿಸಿದ್ದಕ್ಕೆ ನಿಮಗೊಂದು ಮನಃಪೂರ್ವಕ ಧನ್ಯವಾದಗಳು ಯುವರಾಜ್ ಸಿಂಗ್. ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ನೀವು ಸದಾ ಪ್ರಜ್ವಲಿಸುವ ನಕ್ಷತ್ರ ಅನ್ನುವುದು ಶಾಶ್ವತ ಸತ್ಯ. ಹ್ಯಾಪಿ ಬರ್ತ್ ಡೇ ಯುವಿ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel











