RCB – Chahal | ಚಹಾಲ್ ಗೆ ಆರ್ ಸಿಬಿ ಅನ್ಯಾಯ…!!!
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 8 ಸೀಸನ್ಗಳಲ್ಲಿ ಆಡಿದ ಸ್ಪಿನ್ನರ್ ಯುಜ್ವೇಂದ್ರ ಚಹಾಲ್, ಆರ್ ಸಿಬಿಯ ಅವಿಭಾಜ್ಯ ಭಾಗವಾಗಿದ್ದರು.
2014ರ ಐಪಿಎಲ್ ನಲ್ಲಿ ರೆಡ್ ಅಂಡ್ ಗೋಲ್ಡ್ ಕ್ಯಾಂಪ್ ಸೇರಿಕೊಂಡ ಚಹಾಲ್, 2021 ಐಪಿಎಲ್ ವರೆಗೆ ಆರ್ಸಿಬಿ ತಂಡದ ಪ್ರಮುಖ ಬೌಲರ್ ಆಗಿ ಮಿಂಚಿದ್ರು.
ಜೊತೆಗೆ ಟೀಮ್ ಇಂಡಿಯಾಗೂ ಎಂಟ್ರಿಕೊಟ್ಟರು. ಆರ್ ಸಿಬಿ ಪರ ಆಡುತ್ತಾ ಎದುರಾಳಿಗಳನ್ನು ಗಿರಗಿಟ್ಟಲೇ ಹೊಡೆಸುತ್ತಿದ್ದ ಚಹಾಲ್ ಅದೇಷ್ಟೋ ಪಂದ್ಯಗಳನ್ನ ಗೆಲ್ಲಿಸಿಕೊಟ್ಟಿದ್ದಾರೆ.
ಸತತ ಎಂಟು ಸೀಸನ್ ಗಳಲ್ಲಿ ಆರ್ ಸಿಬಿ ಜರ್ಸಿಯಲ್ಲಿ ಮಿಂಚಿದ್ದ ಚಹಾಲ್ ಐಪಿಎಲ್ನಲ್ಲಿ ಒಟ್ಟು 113 ಪಂದ್ಯಗಳಿಂದ 139 ವಿಕೆಟ್ ಪಡೆದು ಯಶಸ್ವಿ ಬೌಲರ್ ಆಗಿ ಗುರುತಿಸಿಕೊಂಡಿದ್ದರು.
ಜೊತೆಗೆ ಕೊಹ್ಲಿಯ ನಂಬಿಕೆಯ ಬೌಲರ್ ಆಗಿದ್ದರು. ಜೊತೆಗೆ ಆರ್ ಸಿಬಿ ಅಭಿಮಾನಿಗಳು ಕೂಡ ಚಹಾಲ್ ಗೆ ವಿಶೇಷ ಸ್ಥಾನವನ್ನ ನೀಡಿದ್ದರು.
ಆದ್ರೆ ಅಚ್ಚರಿ ಎಂಬಂತೆ ಆರ್ಸಿಬಿ ಫ್ರಾಂಚೈಸಿ 2022ರ ಐಪಿಎಲ್ ಗಾಗಿ ಚಹಾಲ್ ಅವರನ್ನ ದಿಢೀರ್ ಆಗಿ ಕೈಬಿಟ್ಟಿತು.
ಮೆಗಾ ಹರಾಜು ಹಿನ್ನೆಲೆಯಲ್ಲಿ ಆರ್ ಸಿಬಿ ಫ್ರಾಂಚೈಸಿ ರಿಟೇನ್ ಆಟಗಾರರ ಪಟ್ಟಿಯನ್ನ ರಿಲೀಸ್ ಮಾಡಿದಾಗ ಆರ್ ಸಿಬಿ ಅಭಿಮಾನಿಗಳಿಗೆ ಶಾಕ್ ಕಾದಿತ್ತು.
ಯಾಕಂದರೆ ರಿಟೈನ್ ಆಟಗಾರರ ಪಟ್ಟಿಯಲ್ಲಿ ಚಹಾಲ್ ಹೆಸರು ಮಿಸ್ ಆಗಿತ್ತು. ಇದು ಅಭಿಮಾನಿಗಳ ಜೊತೆಗೆ ಸ್ವತಃ ಚಹಾಲ್ ಅವರಿಗೂ ನೋವುಂಟು ಮಾಡಿದೆ.
ಇದೀಗ ಇದೇ ವಿಚಾರದ ಬಗ್ಗೆ ಚಹಾಲ್ ಮಾತನಾಡಿದ್ದು, ಆರ್ ಸಿಬಿ ಫ್ರಾಂಚೈಸಿ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ.
ಚಹಾಲ್ ಹೇಳಿಕೊಂಡಿರುವಂತೆ, ಆರ್ ಸಿಬಿಗೆ ಅವರು ತುಂಬಾ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು.
ಚಹಾಲ್ ಅವರಿಗೆ ಆರ್ಸಿಬಿ ಕೇವಲ ಒಂದು ತಂಡವಾಗಿ ಇರಲಿಲ್ಲ. ಬೆಂಗಳೂರು ಅಭಿಮಾನಿಗಳ ಪ್ರೋತ್ಸಾಹ, ಸತತವಾಗಿ ಪಂದ್ಯವನ್ನು ಸೋತರು ಕೈಬಿಡದ ಫ್ಯಾನ್ಸ್ ನಿಯತ್ತಿಗೆ ಮನಸೋತಿದ್ದರು.
ಅಂದಹಾಗೆ ಚಹಾಲ್ ಬೇರೆ ತಂಡ ಸೇರಿಕೊಂಡ ಮೇಲೆ ಅವರಿಗೆ ಸೋಶಿಯಲ್ ಮೀಡಿಯಾದಲ್ಲಿ ಆರ್ ಸಿಬಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆಗಳನ್ನ ಕೇಳಿದ್ದಾರೆ. ನೀವು ಯಾಕೆ ಹೆಚ್ಚು ಹಣವನ್ನ ಕೇಳಿದ್ರೀ…? ಆರ್ ಸಿಬಿ ನಿಮಗೆ ಬೇಡವಾಗಿತ್ತಾ ಎಂಬಂತೆ ಆರ್ ಸಿಬಿಯನ್ಸ್ ಪ್ರಶ್ನಿಸಿದ್ದಾರೆ.
ಇದೀಗ ಈ ಪ್ರಶ್ನೆಗಳಿಗೆ ಉತ್ತರಿಸಿರುವ ಚಹಾಲ್, ನಾನು ಐಪಿಎಲ್ ನಲ್ಲಿ ಆರ್ ಸಿಬಿ ಬಿಟ್ಟು ಬೇರೆ ತಂಡದ ಪರವಾಗಿ ಆಡುತ್ತೇನೆ ಅಂತಾ ಅಂದುಕೊಂಡಿರಲಿಲ್ಲ.
ಹಣವೇ ಮುಖ್ಯವಾಯಿತೇ ಎಂದು ಆರ್ಸಿಬಿ ಫ್ಯಾನ್ಸ್ ಈಗಲೂ ನನ್ನನ್ನು ಪ್ರಶ್ನಿಸುತ್ತಿದ್ದಾರೆ. ಆದರೆ ಆರ್ಸಿಬಿ ತಂಡದಿಂದ ನನ್ನ ಜೀವನ ಸಾಕಷ್ಟು ಬದಲಾಗಿದೆ.
ತಂಡದ ಅಭಿಮಾನಿಗಳೂ ಸಾಕಷ್ಟು ಪ್ರೀತಿ ನೀಡಿದ್ದರು. ನಾನು ಅಭಿಮಾನಿಗಳಿಗೆ ಎಂದಿಗೂ ನಿಯತ್ತಾಗಿದ್ದೆ.
ಆದ್ರೆ ಮೆಗಾ ಹರಾಜಿಗೂ ಮುನ್ನ ಆರ್ಸಿಬಿ ತಂಡ ನನ್ನ ಬಳಿಕ ರಿಟೇನ್ ಆಗುವಿರಾ ಎಂದೂ ಕೇಳಲಿಲ್ಲ. ಬದಲಿಗೆ ಕೊಹ್ಲಿ, ಮ್ಯಾಕ್ಸಿ, ಸಿರಾಜ್ ಅವರನ್ನ ಉಳಿಸಿಕೊಂಡಿದ್ದೇವೆ ಅಂತಾ ಮಾತ್ರ ಹೇಳಿದ್ರು.
ಇದರ ಬದಲಿಗೆ ನೀವು ತಂಡದಲ್ಲಿ ಇರ್ತೀರಾ ಅಂತಾ ಕೇಳಿದ್ದರೆ ನಾನು ಕಣ್ಣುಮುಚ್ಚಿ ಇರಲು ಒಪ್ಪುತ್ತಿದ್ದೆ. ನನಗೆ ಹಣಕ್ಕಿಂತ ತಂಡದ ಜತೆಗಿನ ಬಾಂಧವ್ಯವೇ ಮುಖ್ಯವಾಗಿತ್ತು.
ಆದರೆ ನನ್ನನ್ನು ರಿಟೇನ್ ಮಾಡಿಕೊಳ್ಳದೆ, ಹರಾಜಿನಲ್ಲಿ ಮರಳಿ ಖರೀದಿಸುವೆವು ಎಂದು ತಿಳಿಸಿದ್ದರು. ಆದ್ರೆ ಅದು ಆಗಲಿಲ್ಲ ಎಂದು ಬೇಸರ ಹೊರಹಾಕಿದ್ದಾರೆ.
ಅಂದಹಾಗೆ ಚಹಾಲ್ 2014ರಲ್ಲಿ ಮೂಲಬೆಲೆ 10 ಲಕ್ಷ ರೂ. ಗಳಿಗೆ ಆರ್ಸಿಬಿ ಸೇರಿದ್ದರು. ನಂತರ ಅದೇ ಮೊತ್ತಕ್ಕೆ 2017ರವರೆಗೂ ಆಡಿದ್ದ ಸ್ಪಿನ್ನರ್ 2018 ರಲ್ಲಿ 6 ಕೋಟಿ ರೂ. ಪಡೆದಿದ್ದರು.
ಇದೀಗ ರಾಜಸ್ಥಾನ್ ರಾಯಲ್ಸ್ ತಂಡ ಹರಾಜಿನಲ್ಲಿ ಚಹಾಲ್ ಗೆ 6.50 ಕೋಟಿ ರೂ.ಗೆ ಖರೀದಿಸಿದೆ. ಈ ಮೂಲಕ 8 ವರ್ಷಗಳ ಆರ್ಸಿಬಿಯೊಂದಗಿನ ಒಡನಾಟ 2022ಕ್ಕೆ ಅಂತ್ಯಗೊಂಡಿದೆ.