ಬೆಂಗಳೂರು: ಫ್ರೇಜರ್ ಟೌನ್ ನಲ್ಲಿ ಹದಿನೆಂಟು ಕೋಟಿ ಮೌಲ್ಯದ ಪಾಲಿಕೆ ಆಸ್ತಿಯನ್ನು ನಕಲಿ ಖಾತೆ ಮಾಡಿ, ವಾರ್ಡ್ 78 ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಹಾಗೂ ಪಾಲುದಾರರು ಕಬಳಿಸಿದ್ದಾರೆ ಎಂದು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲಾ ಅಧ್ಯಕ್ಷ ಎನ್ ಆರ್ ರಮೇಶ್ ಆರೋಪ ಮಾಡಿದ್ದಾರೆ. ಈ ಬಗ್ಗೆ ಎಸಿಬಿ, ಬಿಎಮ್ ಟಿಎಫ್ ಹಾಗೂ ಪಾಲಿಕೆ ಆಯುಕ್ತರಿಗೆ ದೂರು ನೀಡಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಆದರೆ ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾರ್ಪೋರೇಟರ್ ಜಾಕೀರ್, ಇದು ನಮ್ಮ ಕುಟುಂಬದ ಆಪ್ತರಿಗೆ ಸೇರಿದ ಆಸ್ತಿಯಾಗಿದ್ದು, ನನಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿದ ಈ ಬಗ್ಗೆ ಮಾತನಾಡಿದ ಎನ್ ಆರ್ ರಮೇಶ್ , ಪಾಲಿಕೆಯ ಹೃದಯಭಾಗದಲ್ಲಿರುವ ಫ್ರೇಜರ್ ಟೌನ್ ನ ಹೇನ್ಸ್ ರಸ್ತೆಯಲ್ಲಿ ಹಾಗೂ ಬಂಬೂ ಬಜಾರ್ ರಸ್ತೆಯ ಎರಡು ಆಸ್ತಿಗಳನ್ನು ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯ ಕಾನೂನುಬಾಹಿರಚಾಗಿ ಕಬಳಿಸಿ, ಖಾಸಗಿ ಕಟ್ಟಡಗಳನ್ನು ನಿರ್ಮಾಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. 1971-74 ರ ಅವಧಿಯಲ್ಲಿ ಮಾಜಿ ಪಾಲಿಕೆ ಸದಸ್ಯ ದಿವಂಗತ ಪಾಂಡ್ಯನ್ ಆರ್ಥಿಕವಾಗಿ ದುಸ್ಥಿತಿಯಲ್ಲಿದ್ದಾಗ, ತೀರಿಹೋದಾಗ ಅವರ ಕುಟುಂಬಕ್ಕೆ ಮನೆ ಕಟ್ಟಿಕೊಳ್ಳಲು ಸ್ವತ್ತಿನ ಸಂಖ್ಯೆ – ೨೫/೨-೧ ಅನ್ನು ಐವತ್ತು ವರ್ಷಗಳ ಕಾಲಕ್ಕೆ ಗುತ್ತಿಗೆ ನೀಡಲಾಗಿತ್ತು. ಇದು ಏಳುಕೋಟಿ ಬೆಳೆಬಾಳುವ ಪ್ರದೇಶವಾಗಿದೆ. ಇದರ ಪಕ್ಕದ ಸ್ವತ್ತನ್ನು 25/1 ಅನ್ನು 1963-64 ರಲ್ಲಿ ಕಾಂಗ್ರೆಸ್ ಮುಖಂಡರಾಗಿದ್ದ, ವಿ ರಾಮಾಂಜಲು ನಾಯ್ಡು ಅವರಿಗೆ, ಅವರ ಕುಟುಂಬ ಪರಿಸ್ಥಿತಿ ಕಷ್ಟದಲ್ಲಿತ್ತು ಎಂಬ ಕಾರಣಕ್ಕೆ 99 ವರ್ಷಗಳ ಗುತ್ತಿಗೆಗೆ ನೀಡಲಾಗಿತ್ತು. ಈ ಎರಡೂ ಆಸ್ತಿಗಳ ಬೆಲೆ ಹದಿನೆಂಟು ಕೋಟಿ ರುಪಾಯಿ ಬೆಲೆಬಾಳುವುದ್ದಾಗಿದೆ.
ನಂತರ ಪಾಲಿಕೆ ಆಯುಕ್ತರ ಅನುಮತಿ ಇಲ್ಲದೆ ಪಾಂಡ್ಯಾನ್ ಅವರ ಪತ್ನಿ ಬೇಬಿಯಮ್ಮ ಅವರಿಗೆ ಕಾನೂನುಬಾಹಿರವಾಗಿ ಆಗಿನ ಪೂರ್ವ ವಲಯದ ಜಂಟಿ ಆಯುಕ್ತರು, ಮಾರಾಟದ ಕ್ರಯ ಪತ್ರ ಮಾಡಿಕೊಟ್ಟಿದ್ದಾರೆ. ಬಳಿಕ ಬೇಬಿಯಮ್ಮ ಮಗಳಿಗೆ ದಾನ ಪತ್ರದ ಮೂಲಕ ಹಕ್ಕನ್ನು ವರ್ಗಾಯಿಸಿದ್ದಾರೆ. ಅದಾದ ನಂತರ ವಾಣಿ, ಕೆ.ತಾಜ್ ಹೆಸರಿಗೆ, ಕೆ.ತಾಜ್ ಎಮ್ ಅಕ್ರಮುಲ್ಲಾ ಹೆಸರಿಗೆ ಕ್ರಯ ಪತ್ರಗಳ ಮೂಲಕ ಸ್ವತ್ತು ಮಾರಾಟ ಮಾಡಿದ್ದಾರೆ. ಈಗಾಗ್ಲೇ ಈ ಜಾಗದಲ್ಲಿ ನಿಯಮಬಾಹಿರವಾಗಿ ತಳಮಹಡಿ ಸೇರಿ ಏಳು ಅಂತಸ್ತಿನ ವಸತಿ ಸಂಕೀರ್ಣ ನಿರ್ಮಿಸಲಾಗ್ತಿದೆ ಎಂದರು.
ನಂತರ ರಾಮಾಂಜಲು ನಾಯ್ಡು ಅವರಿಗೆ ಗುತ್ತಿಗೆಗೆ ಕೊಟ್ಟಿದ್ದ ಆಸ್ತಿಯನ್ನು ದಿಢೀರನೆ ಸ್ವತ್ತಿನ ಸಂಖ್ಯೆ ಬದಲಾಯಿಸಿ, ಅಜೀಂ ಖಾನ್ ಎಂಬುವವರಿಗೆ ಕಾನೂನುಬಾಹಿರವಾಗಿ ಮಾರಾಟ ಮಾಡಿದ್ದಾರೆ. ಬಳಿಕ ಕಂದಾಯ ಇಲಾಖೆ ಅಧಿಕಾರಿಗಳೂ ಸಹ ಭಾಗಿಯಾಗಿ ಕಾನೂನುಬಾಹಿರವಾಗಿ ಅವರ ಮಕ್ಕಳಿಗೆ ಖಾತಾ ಮಾಡಿಕೊಟ್ಟಿದ್ದಾರೆ. ಇಲ್ಲಿ ಏಳು ಮಹಡಿಗಳ ವಾಣಿಜ್ಯ ಕಟ್ಟಡವನ್ನು ನಿರ್ಮಿಸಲಾಗುತ್ತಿದೆ. ಇದರಲ್ಲಿ ವಾರ್ಡ್ ೭೮ ರ ಪಾಲಿಕೆ ಸದಸ್ಯ ಅಬ್ದುಲ್ ರಕೀಬ್ ಜಾಕೀರ್ ಮತ್ತು ಇತರೆ ಪಾಲುದಾರರೂ ಭಾಗಿಯಾಗಿದ್ದಾರೆ ಎಂದು ಎನ್ ಆರ್ ರಮೇಶ್ ಆರೋಪಿಸಿದರು.
ದೂರು ಸ್ವೀಕರಿಸಿದ ಬಿಎಮ್ ಟಿಫ್ ನ ಪೊಲೀಸ್ ಅಧೀಕ್ಷಕ ಓಬಳೇಶ್ ಮಾತನಾಡಿ, ಇದನ್ನು ಪೂರ್ಣವಾಗಿ ತನಿಖೆ ಮಾಡಲಾಗುವುದು. ಸ್ಥಳ ಪರಿಶೀಲನೆ ಮಾಡಿ ಮೇಲ್ನೋಟಕ್ಕೆ ಆರೋಪ ಕಂಡುಬಂದರೆ, ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ನಂತರ ತನಿಖೆ ಮಾಡಿ ಅಂತಿಮ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಗುವುದು ಎಂದರು.
ಈ ಆರೋಪಗಳಿಗೆ ಪ್ರತಿಕ್ರಿಯೆ ನೀಡಿದ ಕಾರ್ಪೋರೇಟರ್ ಜಾಕೀರ್, ನನಗೂ ಈ ಪ್ರಾಪರ್ಟಿಗೂ ಸಂಬಂಧ ಇಲ್ಲ. ಇದು ನಮ್ಮ ಕುಟುಂಬದ ಗೆಳೆಯರಿಗೆ ಸೇರಿದ್ದು. 1960 ರಲ್ಲಿ ಇದನ್ನು ಖರೀದಿಸಿದ್ದಾರೆ. ಅದಕ್ಕೆ ಅಗತ್ಯ ದಾಖಲೆಗಳನ್ನೂ ನೀಡಿದ್ದಾರೆ. ಎಸಿಬಿಗೆ ದೂರು ನೀಡಿದ್ದರೆ,ಅವರು ತನಿಖೆ ನಡೆಸಲಿ. ಯಾವುದೇ ಫೇಕ್ ಡಾಕ್ಯುಮೆಂಟ್ ಇಲ್ಲ. ತನಿಖೆ ಆಗಲಿ ಎಂದರು.









