ಬಳ್ಳಾರಿ : “ಶಾಸಕ ಜಮೀರ್ ಅಹ್ಮದ್ ಅವರನ್ನೂ ಕ್ವಾರಂಟೈನ್ ಮಾಡಬೇಕಿದೆ. ಗೃಹ ಸಚಿವರು ಕೂಡ ಅವರನ್ನು ಕ್ವಾರಂಟೈನ್ ಮಾಡುವ ಕುರಿತು ತಿಳಿಸಿದ್ದಾರೆ. ಎಲ್ಲಾ ರೀತಿಯ ಪರೀಕ್ಷೆ ನಡೆಸಿ ಜಮೀರ್ ಅವರನ್ನು ಹೋಂ ಕ್ವಾರಂಟೈನ್ ಮಾಡಬೇಕಿದೆ” ಎಂದು ಆರೋಗ್ಯ ಸಚಿವ ಶ್ರೀರಾಮುಲು ತಿಳಿಸಿದ್ದಾರೆ .
ಪಾದರಾಯನಪುರ ಗಲಭೆ ಕುರಿತು ಇಂದು ಪ್ರತಿಕ್ರಿಯೆ ನೀಡಿರುವ ಅವರು, “ಈ ಗಲಾಟೆ ವಿಚಾರವಾಗಿ ಸಾಕಷ್ಟು ಚರ್ಚೆಯಾಗಿದೆ. ಇಂತಹ ಸಮಯದಲ್ಲಿ ಎಲ್ಲರೂ ಸಹಕಾರ ನೀಡಬೇಕು. ಯಾರದೋ ಒಪ್ಪಿಗೆ ಪಡೆದು ಹೋಗಬೇಕೆನ್ನುವುದು ಸರಿಯಲ್ಲ” ಜಮೀರ್ ಗೆ ತಿರುಗೇಟು ನೀಡಿದರು.
ಇನ್ನು “ಕೊರೊನಾಗೆ ಸಂಬಂಧಿಸಿದಂತೆ ಇಡೀ ರಾಜ್ಯದಲ್ಲಿ ಪ್ರವಾಸ ಮಾಡುತ್ತಿದ್ದೇನೆ. ಇದುವರೆಗೆ 22 ಜಿಲ್ಲೆ ಸುತ್ತಿರುವೆ. ವೈದ್ಯರು, ಸಿಬ್ಬಂದಿಗೆ ಧೈರ್ಯ ತುಂಬಬೇಕು. ನಿನ್ನೆ ಕ್ಯಾಬಿನೆಟ್ ನಲ್ಲಿ ಲಾಕ್ ಡೌನ್ ಬಗ್ಗೆ ಚರ್ಚೆ ಆಗಿದೆ. ಮೇ 3ರವರೆಗೆ ಲಾಕ್ ಡೌನ್ ಮುಂದುವರಿಯಲಿದೆ. ಹನ್ನೆರಡೂವರೆ ಲಕ್ಷ ಕಿಟ್ ಗಳಿಗೆ ಬೇಡಿಕೆ ಇಟ್ಟಿದ್ದೇವೆ. ಸದ್ಯ 2.50 ಲಕ್ಷ ಕಿಟ್ ಇವೆ. ಇನ್ನಷ್ಟು ಲ್ಯಾಬ್ ಗಳು ಬೇಕಿದೆ. ಮತ್ತಷ್ಟು ಉಪಕರಣಗಳು ಬೇಕಿದೆ. ಎಲ್ಲರ ಅಭಿಪ್ರಾಯ ಪಡೆದು ಚರ್ಚೆ ಮಾಡಲಾಗುತ್ತಿದೆ” ಎಂದು ಮಾಹಿತಿ ನೀಡಿದ್ದಾರೆ.