ಬೆಂಗಳೂರು: ಪಾದರಾಯನಪುರ ಗಲಭೆ ವಿಚಾರವಾಗಿ ಗೊಂದಲಮಯ ಹೇಳಿಕೆಗಳನ್ನು ನೀಡಿ ವಿವಾದಕ್ಕೆ ಗುರಿಯಾಗುತ್ತಿರುವ ಶಾಸಕ ಜಮೀರ್ ಖಾನ್ ಮಾಧ್ಯಮಗಳ ಮೇಲೆ ಗರಂ ಆಗಿದ್ದಾರೆ. ಗಲಾಟೆಗೆ ಪರೋಕ್ಷವಾಗಿ ಜಮೀರ್ ಅಹಮದ್ ಸಹಕರಿಸುತ್ತಿದ್ದಾರೆಂಬ ಹೇಳಿಕೆಗೆ ಸಿಟ್ಟಾದ ಜಮೀರ್, ಮಾಧ್ಯಮಗಳು ಏನೇನೋ ತೋರಿಸುತ್ತಿವೆ. ನಾನು ಗಲಾಟೆಯನ್ನು ಖಂಡಿಸುತ್ತೇನೆ ಎಂದು ಸಿಡಿಮಿಡಿಗೊಂಡರು.
ಈ ವೇಳೆ ಆರೋಗ್ಯಾಧಿಕಾರಿಗಳು ರಾತ್ರಿ ಭೇಟಿ ಕೊಡೋದು ತಪ್ಪಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಲಾಗದೆ ಜಮೀರ್ ಅಲ್ಲಿಂದ ಪಲಾಯನಗೈದ್ರು.
ಅಲ್ಲಿಂದ ಜೆಜೆ ನಗರ ಪೊಲೀಸ್ ಠಾಣೆಗೆ ತೆರಳಿ, ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕಿದ್ರು.
ಬಳಿಕ ಸ್ಟೇಷನ್ ನಿಂದ ಹೊರಬಂದ ಜಮೀರ್ ಮತ್ತೊಮ್ಮೆ ಮಾಧ್ಯಮಗಳ ಮೇಲೆ ಸಿಟ್ಟಾದ್ರು. ಗಲಾಟೆ ಆಗಬಾರದಿತ್ತು, ಆಗಿದೆ. ನಾನು ಇದನ್ನ ಖಂಡಿಸ್ತೀನಿ. ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಿ. ರಾತ್ರಿ ವೇಳೆ ಹೋಗೋದು ಬೇಡ ಅಂದಿದ್ದೆ. 57 ಜನರಿಗೆ ಜಾಗೃತಿ ಮೂಡಿಸಿ ಕರೆದುಕೊಂಡು ಹೋಗಲು ನಾನೇ ಹೇಳಿದ್ದೆ. ನಾನು ಯಾರಿಗೂ ಸಪೋರ್ಟ್ ಮಾಡ್ತಿಲ್ಲ. ಇದನ್ನ ಹೋಮ್ ಮಿನಿಸ್ಟರ್ ಅರ್ಥ ಮಾಡ್ಕೊಳ್ಳಬೇಕು. ಮಾಧ್ಯಮಗಳು ಸೃಷ್ಟಿ ಮಾಡ್ಕಂಡ್ರೆ ಏನ್ ಮಾಡಲಿ..? ಜನ ಆತಂಕದಲ್ಲಿದ್ದಾರೆ, ಇದು ಸೆಸ್ಸಿಟೀವ್ ವಿಷಯ. ನೀವೇ ಮಾತಾಡಿಕೊಳ್ಳಿ ಎಂದು ಹೇಳಿ ಜಮೀರ್ ಅಲ್ಲಿಂದ ಮತ್ತೆ ಹೊರಟರು.