ಬೆಂಗಳೂರು : ಜಾಮೀನಿನ ಮೇಲೆ ಜೈಲಿನಿಂದ ಹೊರಬಂದ ಪಾದರಾಯನಪುರ ಪುಂಡರನ್ನು ಶಾಸಕ ಜಮೀರ್ ಅಹ್ಮದ್ ಅವರು ರಾಜ ಮರ್ಯಾದೆಯೊಂದಿಗೆ ಸ್ವಾಗತಿಸಿದ್ದಾರೆ. ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ಹಲ್ಲೆ ಎಸೆಗಿದ್ದ ಪ್ರಕರಣದ ಎಲ್ಲಾ 126 ಆರೋಪಿಗಳಿಗೂ ಹೈಕೋರ್ಟ್ ಮೇ 29ರಂದು ಷರತ್ತುಬದ್ಧ ಜಾಮೀನು ಮಂಜೂರು ಮಾಡಿತ್ತು. ಕೋರ್ಟ್ ಆದೇಶದ ಬೆನ್ನಲ್ಲೇ ಪೊಲೀಸರು ಹಳೇಗುಡ್ಡದಹಳ್ಳಿಯ ಹಜ್ ಭವನದಲ್ಲಿ ಆರೋಪಿಗಳನ್ನು ಇರಿಸಿ ಕೊರೊನಾ ಟೆಸ್ಟ್ ಮಾಡಿಸಿ, ಎಲ್ಲಾ ಪ್ರಕ್ರಿಯೆ ಬಳಿಕ ಇಂದು ಬಿಡುಗಡೆ ಮಾಡಿದರು.
ಆರೋಪಿಗಳನ್ನು ಕರೆದೊಯ್ಯಲು ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಅವರ ಮಾಲೀಕತ್ವದ ಬಸ್ ಹಳೇಗುಡ್ಡದಹಳ್ಳಿಯ ಹಜ್ ಭವನಕ್ಕೆ ಬಂದಿತ್ತು. ಅಷ್ಟೇ ಅಲ್ಲದೆ ಅವರನ್ನು ಸ್ವಾಗತಿಸಲು ಸ್ವತಃ ಜಮೀರ್ ಅಹ್ಮದ್ ಹಾಗೂ ಆರೋಪಿಗಳ ಕುಟುಂಬಸ್ಥರು ನ್ಯಾಷನಲ್ ಟ್ರಾವೆಲರ್ಸ್ ನ ಮೂರು ಬಸ್ ಗಳಲ್ಲಿ ಆಗಮಿಸಿದ್ದರು. ಹೀಗಾಗಿ ಅಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು.
ಹಣ ನೀಡದ ಜಮೀರ್ ಅಹ್ಮದ್
ಖುದ್ದು ಮುಂದೆ ನಿಂತು ಆರೋಪಿಗಳನ್ನು ಸ್ವಾಗತಿಸಿದ ಜಮೀರ್ ಅಹ್ಮದ್, “ದೇವರು ನಿಮ್ಮನ್ನ ಚೆನ್ನಾಗಿ ಇಟ್ಟಿರಲಿ” ಎಂದು ಹಾರೈಸಿದರು. ಬಳಿಕ ಅವರಿಗೆ ಹಣ ಕೊಟ್ಟು, ಬಸ್ ನಲ್ಲಿ ಹತ್ತಿಸಿ ಕಳುಹಿಸಿಕೊಟ್ಟಿದ್ದಾರೆ. ಜೊತೆಗೆ ಜಮೀರ್ ಅಹ್ಮದ್ ಅವರೇ 1.26 ಕೋಟಿ ರೂ. ಬಾಂಡ್, ಶ್ಯೂರಿಟಿಯನ್ನು ಕೋರ್ಟಿಗೆ ನೀಡಿ ಪಾದರಾಯನಪುರ ಪುಂಡರಿಗೆ ಜಾಮೀನು ಕೊಡಿಸಿದ್ದಾರೆ ಎನ್ನಲಾಗುತ್ತಿದೆ.