ಕೋವಿಡ್-19 ನಿಯಮ ಉಲ್ಲಂಘಿಸಿ ಹೂ ಹಾಕಿ ಪಾದಪೂಜೆ ಮಾಡಿಸಿಕೊಂಡ ಜಮೀರ್ ಅಹ್ಮದ್
ಬೆಂಗಳೂರು, ಜುಲೈ 1: ಬೆಂಗಳೂರಿನಲ್ಲಿ ಕೊರೊನಾ ಸೋಂಕಿನ ಆರ್ಭಟ ಎಲ್ಲೆಮೀರಿದೆ. ಸಾಮಾಜಿಕ ಅಂತರ ಕಾಯ್ದುಕೊಂಡು ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಮಾರ್ಗಸೂಚಿಗಳನ್ನು ಪಾಲಿಸಲೇ ಬೇಕಿರುವುದು ಅತ್ಯಂತ ಅವಶ್ಯಕ. ಆದರೆ ಈ ವಿಷಯದಲ್ಲಿ ಜನರಿಗೆ ಮಾದರಿಯಾಗಬೇಕಾಗಿದ್ದ ಶಾಸಕ ಜಮೀರ್ ಅಹ್ಮದ್ ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಅದ್ದೂರಿ ಸನ್ಮಾನ ಮಾಡಿಕೊಂಡಿದ್ದಾರೆ. ಹಿಂದೆ ಕೂಡ ಅನೇಕ
ವಿವಾದಗಳನ್ನು ಮೈ ಮೇಲೆ ಎಳೆದು ಕೊಂಡಿದ್ದ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಕಾಲು ತೊಳೆದು, ಹೂ ಹಾಕಿ ಪಾದಪೂಜೆ ಮಾಡಿಸಿಕೊಂಡು ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಕಳೆದ ಭಾನುವಾರ ಕೆಂಪೇಗೌಡನಗರದ ಕಲ್ಯಾಣ ಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಸಕ ಜಮೀರ್ ಅಹ್ಮದ್ ತಮ್ಮ ಬೆಂಬಲಿಗರಿಂದ ಅದ್ದೂರಿ ಸನ್ಮಾನ ಮಾಡಿಸಿಕೊಂಡು ಕೊವೀಡ್ ನಿಯಮಗಳನ್ನು ಉಲ್ಲಂಘನೆ ಮಾಡಿದ್ದಾರೆ.
ಕೊರೊನಾ ಸೋಂಕಿನಿಂದ ಮೃತಪಟ್ಟ ರೋಗಿಗಳ ಶವ ಸಂಸ್ಕಾರವನ್ನು ಜಮೀರ್ ಅಹ್ಮದ್ ಅವರು ಉಚಿತವಾಗಿ ನೆರವೇರಿಸಲು ಸಹಾಯ ಮಾಡುತ್ತಿದ್ದಾರೆ ಎಂದು ಅವರ ಬೆಂಬಲಿಗರು ಜೂನ್ 28 ರಂದು ಸನ್ಮಾನ ಮಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಜಮೀರ್ ಅಹಮದ್ ಬೆಂಬಲಿಗರು ಜಮೀರ್ ಮೇಲೆ ಹೂವಿನ ಸುರಿಮಳೆಗೈದು ಬಳಿಕ ಪಾದಪೂಜೆ ಮಾಡಿದ್ದಾರೆ. ಪಾದಪೂಜೆಯ ಸಮಯದಲ್ಲಿ ಅಪಾರ ಬೆಂಬಲಿಗರು ಗುಂಪು ಗೂಡಿದ್ದು ಸಾಮಾಜಿಕ ಅಂತರವಿಲ್ಲದೆ ಸನ್ಮಾನ ಮಾಡಿರುವುದು ಕಂಡು ಬಂದಿದೆ.
ಸಾಮಾಜಿಕ ಜಾಲತಾಣದಲ್ಲಿ ಸನ್ಮಾನದ ವೀಡಿಯೋಗಳು ವೈರಲ್ ಆಗಿದ್ದು, ರಾಜ್ಯದಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಸಮಯದಲ್ಲಿ ಜಮೀರ್ ಅವರ ಪಾದಪೂಜೆ ಕಾರ್ಯಕ್ರಮಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಕೊವೀಡ್ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಶಾಸಕ ಜಮೀರ್ ಅಹ್ಮದ್ ಹಾಗೂ ಬೆಂಬಲಿಗರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಡಗಳು ಹೆಚ್ಚಾಗಿವೆ ಎಂದು ಹೇಳಲಾಗುತ್ತಿದ್ದರೂ, ಘಟನೆ ಸಂಬಂಧ ಇದುವರೆಗೂ ಯಾವುದೇ ದೂರು, ಕೇಸ್ ದಾಖಲಾಗಿಲ್ಲ ಎಂದು ಹೇಳಲಾಗುತ್ತಿದೆ.








