ಸಿರಿಯಾ ಮೇಲೆ ಅಮೆರಿಕಾ ವೈಮಾನಿಕ ದಾಳಿ : 22 ಮಂದಿ ಸಾವು..?
ಬಾಗ್ದಾದ್ : ಅಮೆರಿಕ ಮತ್ತೆ ಸಿರಿಯಾ ಮೇಲೆ ದಾಳಿ ನಡೆಸಿದೆ. ಯುನೈಟೆಡ್ ಸ್ಟೇಟ್ಸ್ ಗುರುವಾರ ರಾತ್ರಿ ಇರಾನ್ ಬೆಂಬಲಿತ ಇರಾಕ್ ಮಿಲಿಟೆಂಟ್ ಗ್ರೂಪ್ ಸ್ಥಾವರಗಳ ಮೇಲೆ ವೈಮಾನಿಕ ದಾಳಿ ನಡೆಸಿದೆ.
ಈ ದಾಳಿಯಲ್ಲಿ ಇರಾಕಿ ಉಗ್ರಸಂಸ್ಥೆಗಳಿಗೆ ಸಂಬಂಧಿಸಿದ ಉಗ್ರಗಾಮಿ ನೆಲೆಗಳು ಧ್ವಂಸವಾಗಿವೆ. ಈ ದಾಳಿಯಲ್ಲಿ 22 ಜನರು ಸಾವನ್ನಪ್ಪಿದ್ದಾರೆ ಎಂದು ಸಿರಿಯನ್ ಮಾನವ ಹಕ್ಕುಗಳ ವೀಕ್ಷಣಾಲಯ ಹೇಳಿದೆ.
ಆದರೆ, ಒಬ್ಬ ವ್ಯಕ್ತಿ ಮಾತ್ರ ಸಾವನ್ನಪ್ಪಿದ್ದಾನೆ ಮತ್ತು ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಇರಾಕಿ ಮಿಲಿಟರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಫೆಬ್ರವರಿ ಆರಂಭದಲ್ಲಿ ಇರಾಕ್ನಲ್ಲಿ ಯು.ಎಸ್. ಪಡೆಗಳನ್ನು ಗುರಿಯಾಗಿಸಿಕೊಂಡು ನಡೆದ ರಾಕೆಟ್ ದಾಳಿಗೆ ಪ್ರತೀಕಾರವಾಗಿ ಈ ದಾಳಿ ನಡೆಸಿರುವುದಾಗಿ ಅಮೆರಿಕಾ ತಿಳಿಸಿದೆ.
ಸಿರಿಯಾ-ಇರಾಕಿ ಗಡಿಯಲ್ಲಿರುವ ಕತಬ್ ಹೆಜ್ಬೊಲ್ಲಾ ಗುಂಪಿಗೆ ಸೇರಿದ ನೆಲೆಗಳಿಗೆ ಮಾರಕ ಆಯುಧಗಳನ್ನು ಸಾಗಿಸುತ್ತಿದ್ದ ಮೂರು ಲಾರಿಗಳು ಸಹ ಅಮೆರಿಕಾ ದಾಳಿಯಲ್ಲಿ ಧ್ವಂಸವಾಗಿವೆ. ಈ ಗುಂಪನ್ನು ಹಿಜ್ಬುಲ್ಲಾ ಬ್ರಿಗೇಡ್ಸ್ ಎಂದೂ ಸಹ ಕರೆಯುತ್ತಾರೆ.
ಇರಾಕ್ನಲ್ಲಿ ಯುಎಸ್ ಪಡೆಗಳನ್ನು ಬೆಂಬಲಿಸುತ್ತೇವೆ: ಆಸ್ಟಿನ್
ಮಧ್ಯಪ್ರಾಚ್ಯದಲ್ಲಿ ಯುಎಸ್ ಮಿಲಿಟರಿ ಬಲವನ್ನು ವಿಸ್ತರಿಸಲು ಬಿಡನ್ ಈ ದಾಳಿಗೆ ನಿರ್ದೇಶನ ನೀಡಿಲ್ಲ, ಆದರೆ ಇದರ ಮುಖ್ಯ ಉದ್ದೇಶ ಇರಾಕ್ ನಲ್ಲಿ ಯುಎಸ್ ಪಡೆಗಳನ್ನು ಬೆಂಬಲಿಸುವುದು ಎಂದು ಅಮೆರಿಕಾ ರಕ್ಷಣ ಮಂತ್ರಿ ಆಸ್ಟಿನ್ ಸ್ಪಷ್ಟಪಡಿಸಿದ್ದಾರೆ.