ಚಾಮರಾಜನಗರ Chamarajanagar : ಆನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾದ ಪ್ರವಾಸಿಗರು
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥಸ್ವಾಮಿ ಹುಲಿ ಸಂರಕ್ಷಿತ (ಬಿಆರ್ಟಿ) ಪ್ರದೇಶದ ಕೆ.ಗುಡಿ ವಲಯದಲ್ಲಿ ಸಫಾರಿ ನಡೆಸುತ್ತಿದ್ದ ಪ್ರವಾಸಿಗರು ಎರಡು ಆನೆಗಳ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿರುವ ವೀಡಿಯೋದಲ್ಲಿ, ಹಿಂಬದಿಯಿಂದ ಹೆಣ್ಣಾನೆಯೊಂದು ಸಫಾರಿ ವಾಹನವನ್ನು ಬೆನ್ನಟ್ಟುತ್ತಿರುವುದು ಹಾಗೂ ಪ್ರವಾಸಿಗರು ಅದರಿಂದ ತಪ್ಪಿಸಿಕೊಂಡ ತಕ್ಷಣ, ಎದುರು ಭಾಗದಲ್ಲಿ ಇನ್ನೊಂದು ಹೆಣ್ಣಾನೆ ವಾಹನಕ್ಕೆ ಅಡ್ಡ ಬಂದ ವಿಡಿಯೊ ತುಣುಕು ಇದೀಗ ವೈರಲ್ ಆಗಿದೆ. ಸಫಾರಿ ವಾಹನದಲ್ಲಿದ್ದ ಪ್ರವಾಸಿಗರೊಬ್ಬರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯಗಳನ್ನು ಸೆರೆ ಹಿಡಿದಿದ್ದಾರೆ.
ಕೆ.ಗುಡಿ ವಲಯದ ಭತ್ತದಗದ್ದೆ ಸಫಾರಿ ರಸ್ತೆಯಲ್ಲಿ ಆನೆಗಳು ಸಫಾರಿ ವಾಹನದ ಮೇಲೆ ದಾಳಿ ನಡೆಸಲು ಯತ್ನಿಸಿದ್ದು, ಸಫಾರಿ ವಾಹನ ಚಾಲಕ ನಾಗರಾಜು ಎಂಬುವವರು ಆತಂಕದ ಸನ್ನಿವೇಶದಲ್ಲೂ ವಾಹನದ ಎದುರಿಗೆ ಅಡ್ಡ ಬಂದ ಹೆಣ್ಣಾನೆಯನ್ನು ಬೆನ್ನಟ್ಟಲು ಯಶಸ್ವಿಯಾಗಿದ್ದಾರೆ.