ಹುಬ್ಬಳ್ಳಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕು. ರಾಜ್ಯದ ಎಲ್ಲಾ ಎಪಿಎಂಸಿಗಳಲ್ಲಿ ವ್ಯಾಪಾರಸ್ಥರ ಮೇಲೆ ವಿಧಿಸುತ್ತಿರುವ ಸೆಸ್‍ನ್ನು ಸಂಪೂರ್ಣ ರದ್ದುಪಡಿಸಬೇಕು ಆಗ್ರಹಿಸಿ ನಾಳೆಯಿಂದ ಅನಿರ್ಧಿಷ್ಟ ಅವಧಿಗೆ ಎಪಿಎಂಸಿ ಬಂದ್ ಮಾಡಲು ತೀರ್ಮಾನಿಸಲಾಗಿದೆ.
ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆ ಸಭಾಂಗಣದಲ್ಲಿ ನಡೆದ ಏಳು ಜಿಲ್ಲೆಗಳ ವರ್ತಕರ ಸಂಘದ ಸಬೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ.
ಹೊಸ ಕಾಯ್ದೆಯ ಪ್ರಕಾರ ನೇರವಾಗಿ ರೈತರಿಂದ ಉತ್ಪನ್ನಗಳನ್ನು ವ್ಯಾಪಾರಸ್ಥರು ಖರೀದಿಸಬಹುದು. ಎಪಿಎಂಸಿ ಹೊರಗಡೆ ನಡೆಯುವ ವಹಿವಾಟಿಗೆ ಯಾವುದೇ ಸೆಸ್ ವಿಧಿಸಿಲ್ಲ. ಆದರೆ ಎಪಿಎಂಸಿ ಒಳಗೆ ನಡೆಯುವ ವ್ಯಾಪಾರ ವಹಿವಾಟಿಗೆ ಶೇ.1ರಷ್ಟು ಸೆಸ್ ವಿಧಿಸಲಾಗಿದೆ. ಇದರಿಂದ ಎಪಿಎಂಸಿ ವರ್ತಕರಿಗೆ ಅನ್ಯಾಯವಾಗುತ್ತದೆ. ಹೆಚ್ಚುವರಿ ಸೆಸ್‍ನಿಂದಾಗಿ ಎಪಿಎಂಸಿ ಒಳಗೆ ವಹಿವಾಟು ನಡೆಸಲು ರೈತರು ಹಿಂಜರಿಯುತ್ತಾರೆ. ಒಂದು ದೇಶ ಒಂದು ತೆರಿಗೆ ಪದ್ಧತಿಗೆ ರಾಜ್ಯ ಸರ್ಕಾರ ಬದ್ಧವಾಗಿ ಇರಬೇಕು. ತಾರತಮ್ಯ ಮಾಡುವುದು ಸರಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು.
ನಾಳೆಯಿಂದ ಆರಂಭವಾಗುವ ಎಪಿಎಂಸಿ ವರ್ತಕರ ಮುಷ್ಕರದಲ್ಲಿ ರಾಜ್ಯದ 162 ಎಪಿಎಂಸಿಗಳ ವರ್ತಕರು ಕೈಜೋಡಿಸಲಿದ್ದಾರೆ. ಹೀಗಾಗಿ ಅನ್‍ಲಾಕ್ ಬಳಿಕ ಸಾರ್ವಜನಿಕರು ಹಾಗೂ ರೈತರು ಮತ್ತೊಂದು ರೀತಿಯ ಸಮಸ್ಯೆ ಎದುರಿಸುವ ಪರಿಸ್ಥಿತಿ ಎದುರಾಗುವ ಸಾಧ್ಯತೆ ಇದೆ. ಈರುಳ್ಳಿ, ಆಲೂಗಡ್ಡೆ, ದವಸ ಧಾನ್ಯ, ಒಣ ಮೆಣಸು, ಶೇಂಗಾ, ಹತ್ತಿಕಾಳು, ತರಕಾರಿ ಸೇರಿದಂತೆ ವಿವಿಧ ಉತ್ಪನ್ನಗಳ ವಹಿವಾಟು ಬಂದ್ ಆಗಲಿದೆ.
ನಾಳೆಯಿಂದ ರೈತರು ಮಾರುಕಟ್ಟೆಗಳಿಗೆ ಉತ್ಪನ್ನಗಳನ್ನು ತರಬಾರದು ಎಂದು ವರ್ತಕರ ಸಂಘ ಮನವಿ ಮಾಡಿದೆ. ಎಪಿಎಂಸಿ ಕ್ರಿಯಾ ಸಮಿತಿ ಅಧ್ಯಕ್ಷ ಶಂಕ್ರಣ್ಣ ಮುನವಳ್ಳಿ, ಹುಬ್ಬಳ್ಳಿ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ್ ಸೇರಿದಂತೆ ಹಲವು ಪ್ರಮುಖರು ಅನಿರ್ದಿಷ್ಟಾವಧಿ ಮುಷ್ಕರದ ನೇತೃತ್ವ ವಹಿಸಲಿದ್ದಾರೆ. ಸರ್ಕಾರ ಸೆಸ್ ಹಿಂಪಡೆಯುವವರೆಗೆ ಹೋರಾಟ ನಡೆಸುವುದಾಗಿ ಎಪಿಎಂಸಿ ವರ್ತಕರು ಘೋಷಿಸಿದ್ದಾರೆ.