ಸಂಕಷ್ಟದ ಸಮಯದಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಬಾರದು – ಎಚ್‍ಡಿಕೆ
ರಾಜ್ಯದಲ್ಲಿ ಈಗ ಸಂಕಷ್ಟದ ಸಮಯ. ಈ ಸಂದರ್ಭದಲ್ಲಿ ಯಾರು ಕೂಡ ಸರ್ಕಾರವನ್ನು ಅಸ್ಥಿರಗೊಳಿಸಬಾರದು. ಗುಂಪುಗಾರಿಕೆ ಅನ್ನೋ ಮಾತುಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವನ್ನು ಅಸ್ಥಿರಗೊಳಿಸಿದ್ರೆ ಜನರಿಗೆ ತೊಂದರೆಯಾಗುತ್ತದೆ. ಜನರಿಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಹೇಳಿದ್ದಾರೆ.
ಸರ್ಕಾರದ ಅಭಿವೃದ್ದಿ ಕೆಲಸಗಳಿಗೆ ನನ್ನ ಸಂಪೂರ್ಣ ಬೆಂಬಲ ಇದೆ. ಈ ಬಗ್ಗೆ ನಾನು ಪದೇ ಪದೇ ಹೇಳುತ್ತನೇ ಇದ್ದೇನೆ. ರಾಜ್ಯದಲ್ಲಿ ಕೊರೋನಾ ಸೋಂಕು ಜಾಸ್ತಿಯಾಗುತ್ತಿದೆ. ಈ ಸಮಯದಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ಇಲ್ಲಿ ಪಕ್ಷ ಮುಖ್ಯವಲ್ಲ. ರಾಜಕಾರಣ ಮಾಡಬಾರದು. ಜನರ ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಬೇಕು. ಈ ಬಗ್ಗೆ ಎಲ್ಲರೂ ಒಟ್ಟಾಗಿ ಶ್ರಮಿಸಬೇಕು ಎಂದು ಎಚ್‍ಡಿಕೆ ಹೇಳಿದ್ದಾರೆ.
ಮಾರ್ಚ್‍ನಲ್ಲಿ ನಡೆದಿದ್ದ ಸರ್ವ ಪಕ್ಷದ ಸಭೆಯಲ್ಲಿ ನಾನು ಭಾಗಿಯಾಗಿದ್ದೆ. ಆಗ ಸರ್ಕಾರಕ್ಕೆ ಸಲಹೆ ನೀಡಿದ್ದೆ. ಆದ್ರೆ ನನ್ನ ಸಲಹೆಗಳನ್ನು ಸರ್ಕಾರ ಪರಿಗಣಿಸಿಲ್ಲ. ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು. ಆಗ ಎಲ್ಲಾ ಸಮಸ್ಯೆಗಳು
ಬಗೆಹರಿಸಲು ಸಾಧ್ಯ ಎಂದು ಎಚ್‍ಡಿಕೆ ಅಭಿಪ್ರಾಯಪಟ್ಟಿದ್ದಾರೆ.
ಇನ್ನು ಬಿಎಸ್‍ವೈ ಸರ್ಕಾರದ ಮಂತ್ರಿಗಳಲ್ಲಿ ಸರಿಯಾದ ಹೊಂದಾಣಿಕೆ ಇಲ್ಲ. ಮುಖ್ಯವಾಗಿ ಮಂತ್ರಿಗಳು ಹೊಂದಾಣಿಕೆ ಮಾಡಿಕೊಂಡು ಕೆಲಸ ಮಾಡಿದ್ರೆ ಇನ್ನು ಅಭಿವೃದ್ದಿ ಕಾರ್ಯಗಳನ್ನು ಉತ್ತಮಪಡಿಸಬಹುದು. ಹಾಗೇ ಕೊರೊನಾ ಸೋಂಕನ್ನು ತಡೆಗಟ್ಟಬಹುದು. ಆದ್ರೆ ಸರ್ಕಾರದ ಕಾರ್ಯ ವೈಖರಿ ನನಗೆ ಸಮಾಧಾನ ತಂದಿಲ್ಲ ಎಂದು ಎಚ್‍ಡಿಕೆ ಹೇಳಿದ್ದಾರೆ.
ಬಿಜೆಪಿ ಸರ್ಕಾರ ಬಂದ ತಕ್ಷಣವೇ ನೆರೆ ಹಾವಳಿ ಬಂತು. ಈಗ ಕೊರೊನಾ ಸೋಂಕು. ಅಭಿವೃದ್ದಿ ಕೆಲಸಗಳು ನಡೆದಿಲ್ಲ. ಅಭಿವೃದ್ದಿ ಕಾರ್ಯಗಳನ್ನು ಮಾಡಲು ಸಾಧ್ಯವಾಗಿಲ್ಲ. ನನ್ನ ಆಡಳಿತ ಅವಧಿಯಲ್ಲಿ ಕೈಗೊಂಡ ಯೋಜನೆಗಳು ನಡೆಯುತ್ತಿವೆ ಎಂದ ಎಚ್‍ಡಿಕೆ, ಸರ್ಕಾರದ ಭ್ರಷ್ಟಚಾರದ ಬಗ್ಗೆ ಹೋರಾಟ ಮಾಡುವ ಸಮಯ ಈಗ ಅಲ್ಲ. ಈಗ ನಾವು ಕೊರೋನಾ ವಿರುದ್ಧ ಹೋರಾಟ ನಡೆಸಬೇಕು. ಸರ್ಕಾರದ ಕಾರ್ಯವೈಖರಿಗಳ ಬಗ್ಗೆ ಚರ್ಚೆ ಮಾಡಲು ಇನ್ನೂ ಸಮಯವಿದೆ. ಆಗ ಹೋರಾಟ ಮಾಡೋಣ. ಈಗ ಎಲ್ಲರೂ ಜೊತೆಯಾಗಿದ್ದುಕೊಂಡು ಜನರ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದು ಹೇಳಿದ್ದಾರೆ.








