ವಿರಾಟನ ಯುಕ್ತಿ.. ಎಬಿಡಿಯ ಶಕ್ತಿ..
ಐಪಿಎಲ್ ಕುರುಕ್ಷೇತ್ರದಲ್ಲಿ ಆರ್ ಸಿಬಿ ಆರ್ಭಟ..!
ಈ ಬಾರಿ ಕಪ್ ನಮ್ದೆ..
ಇದು ಆರ್ ಸಿಬಿ ಅಭಿಮಾನಿಗಳ ಬಾಯಲ್ಲಿ ಕಳೆದ 12 ವರ್ಷದಿಂದ ಕೇಳಿ ಬರುತ್ತಿರುವ ಜಪ.
ಹೌದು, ಈ ಬಾರಿ ಆರ್ ಸಿಬಿ ಐಪಿಎಲ್ ಪ್ರಶಸ್ತಿ ಗೆಲ್ಲುವ ಚಿಕ್ಕ ಸುಳಿವನ್ನು ನೀಡಿದೆ.
ಆರ್ ಸಿಬಿಯ ಪ್ರದರ್ಶನ ಅಭಿಮಾನಿಗಳಿಗೆ ಹಿತವನ್ನುಂಟು ಮಾಡುತ್ತಿದೆ. ಎಲ್ಲೋ ಒಂದು ಕಡೆ ಭರವಸೆ ಮೂಡಿಸಿದೆ. ಆರ್ ಸಿಬಿ ಗೆದ್ದೇ ಗೆಲ್ಲುತ್ತೆ.. ಈ ಬಾರಿ ಕಪ್ ನಮ್ದೆ ಅಂತ ಬೀಗುವಂತೆ ಮಾಡಿದೆ ವಿರಾಟ್ ಪಡೆ.
ಅಂದ ಹಾಗೇ ಆರ್ ಸಿಬಿ ಐಪಿಎಲ್ ನಲ್ಲಿ 12 ವರ್ಷಗಳ ಪ್ರಶಸ್ತಿ ಬರದ ವನವಾಸವನ್ನು ಮುಗಿಸಿದೆ.
ಹಾಗೇ ಒಂದು ವರ್ಷದ ಅಜ್ಞಾತವಾಸದಂತೆ ಐಪಿಎಲ್ ನ ಮೊದಲ ಹಂತದ ಹಿನ್ನಡೆಯಿಂದಲೂ ಹೊರಬಂದಿದೆ.
ಇದೀಗ ಐಪಿಎಲ್ ಕುರುಕ್ಷೇತ್ರ ಎರಡನೇ ಹಂತದದಲ್ಲಿ ಗೆಲುವಿನ ನಗಾರಿ ಮೊಳಗಿಸುತ್ತಿದೆ.
ಇಲ್ಲಿ, ವಿರಾಟ್ ಕೊಹ್ಲಿಯ ಯುಕ್ತಿ.. ಎಬಿಡಿ ವಿಲಿಯರ್ಸ್‍ನ ಶಕ್ತಿ.. ಆರೋನ್ ಫಿಂಚ್ ನ ಕೀರ್ತಿ… ದೇವದತ್ತ್ ಪಡಿಕ್ಕಲ್ ನ ಪ್ರೀತಿ.. ವಾಸಿಂಗ್ಟನ್ ಸುಂದರ್ ನ ಸ್ಪೂರ್ತಿ…
ಕ್ರಿಸ್ ಮೋರಿಸ್ ನ ಬೌಲಿಂಗ್ ತಂತ್ರ.. ಯುಜುವೇಂದ್ರ ಚಾಹಲ್ ನ ಸ್ಪಿನ್ ಮಂತ್ರ..
ನವದೀಪ್ ಸೈನಿಯ ಮಿಂಚಿನ ಎಸೆತದ ಕಾಟ.. ಇಸುರು ಉಡಾನೆಯ ಶಿಸ್ತು ಬದ್ಧ ಹೋರಾಟ…ಮಹಮ್ಮದ್ ಸಿರಾಜ್ ನ ಆರ್ಭಟ… ಶಿವಂ ದುಬೆಯ ಆಲ್ ರೌಂಡ್ ಆಟ.. ಇದೆಲ್ಲಾ ವರ್ಕ್ ಔಟಾದ್ರೆ ಮುಗಿಲು ಮುಟ್ಟುತ್ತೆ ಅಭಿಮಾನಿಗಳ ಚೀರಾಟ.. ಮುಂದುವರಿಯುತ್ತೆ ಆರ್ ಸಿಬಿಯ ಗೆಲುವಿನ ಓಟ.. ಯಾಮಾರಿದ್ರೆ ಮಾತ್ರ ಕಲಿಸುತ್ತೆ ಸೋಲಿನ ಪಾಠ.
ಸದ್ಯ ಆರ್ ಸಿಬಿ ತಂಡ 9 ಪಂದ್ಯಗಳನ್ನು ಆಡಿದೆ. ಇದ್ರಲ್ಲಿ ಆರು ಪಂದ್ಯಗಳನ್ನು ಗೆದ್ದುಕೊಂಡಿದೆ. ಮೂರು ಪಂದ್ಯಗಳನ್ನು ಸೋಲು ಅನುಭವಿಸಿದೆ. ಒಟ್ಟು 12 ಅಂಕಗಳೊಂದಿಗೆ ಮೂರನೇ ಸ್ಥಾನದಲ್ಲಿದೆ.
ಇದೀಗ 10ನೇ ಪಂದ್ಯವನ್ನು ಆಡುತ್ತಿದೆ. ಕೆಕೆಆರ್ ವಿರುದ್ಧ ಆರ್ ಸಿಬಿ ಮತ್ತೊಂದು ಗೆಲುವು ದಾಖಲಿಸಿ ಪ್ಲೇ ಆಫ್ ಎಂಟ್ರಿಯನ್ನು ಖಚಿತಪಡಿಸಿಕೊಳ್ಳಲು ಹೋರಾಟ ನಡೆಸಲಿದೆ.
ನಮ್ಮ ಬೆಂಗಳೂರಿನ ಹೆಮ್ಮೆಯ ಪ್ರತೀಕವಾಗಿರುವ ರಾಯಲ್ ಚಾಲೆಂಜರ್ಸ್ ತಂಡ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದೆ.
ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಆರ್ ಸಿಬಿಯ ಭಾಗವಾಗಿದ್ದಾರೆ. ಹೀಗಾಗಿ ಅಭಿಮಾನಿಗಳಿಗೆ ಈ ಬಾರಿ ನಿರಾಸೆ ಮೂಡಿಸುವುದಿಲ್ಲ. ಪ್ರಶಸ್ತಿ ಗೆದ್ದೇ ಗೆಲ್ಲುತ್ತೇವೆ ಅನ್ನೋ ರೀತಿಯಲ್ಲಿ ಆರ್ ಸಿಬಿ ತಂಡ ಆಡುತ್ತಿದೆ.
ಅಂದ ಹಾಗೇ, ಆರ್ ಸಿಬಿ ತಂಡವನ್ನು ಅಭಿಮಾನಿಗಳು ಹೃದಯದಿಂದ ಪ್ರೀತಿಸುತ್ತಿದ್ದಾರೆ. ಬೇರೆ ರಾಜ್ಯಗಳ ಹಾಗೂ ಬೇರೆ ದೇಶದ ಆಟಗಾರರು ಇದ್ರೂ ಕೂಡ ನಮ್ಮವರು ಅನ್ನೋ ಭಾವನೆಯನ್ನಿಟ್ಟುಕೊಂಡಿದ್ದಾರೆ.
ಅದ್ರಲ್ಲೂ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಮೇಲಿನ ಅಭಿಮಾನವನ್ನಂತೂ ಬಣ್ಣಿಸಲು ಸಾಧ್ಯವಿಲ್ಲ.
ಆರ್ ಸಿಬಿಗೆ ಎಬಿಡಿ ಆಮ್ಲಜನಕವಾದ್ರೆ, ವಿರಾಟ್ ಕೊಹ್ಲಿ ಉಸಿರಾಗಿದ್ದಾರೆ. ಇದ್ರಿಂದಲೇ ಆರ್ ಸಿಬಿಯ ಪಂದ್ಯ ನಡೆದಾಗ ಅಭಿಮಾನಿಗಳ ಹೃದಯಬಡಿತ ಕೂಡ ಹೆಚ್ಚಾಗುತ್ತದೆ.
ಒಟ್ಟಿನಲ್ಲಿ ಐಪಿಎಲ್ ಪ್ರಶಸ್ತಿ ಬರವನ್ನು ಎದುರಿಸುತ್ತಿರುವ ಆರ್ ಸಿಬಿ ಈ ಬಾರಿಯಾದ್ರೂ ಪ್ರಶಸ್ತಿ ಗೆಲ್ಲಲೇಬೇಕು ಅನ್ನೋದು ಆರ್ ಸಿಬಿ ಅಭಿಮಾನಿಗಳ ಒಕ್ಕೋರಲ ಕೂಗು.








