ಕೊರೋನಾ ಸೋಂಕಿತರಿಗಾಗಿ 550 ಬೆಡ್ ಖರೀದಿಸಿದ ರಾಜ್ಯ ಕಾಂಗ್ರೆಸ್
ದೊಡ್ಡಬಳ್ಳಾಪುರ : ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯ ಕಾಂಗ್ರೆಸ್ ವತಿಯಿಂದ 55 ಬೆಡ್ ಗಳನ್ನು ಖರೀದಿ ಮಾಡಲಾಗಿದೆ. ಈ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾಹಿತಿ ನೀಡಿದ್ದು, ಕೆಪಿಸಿಸಿ ವತಿಯಿಂದ ಕೊರೋನಾ ಸೋಂಕಿತರ ಚಿಕಿತ್ಸೆಗಾಗಿ ತಲಾ 850 ರೂ. ಮೊತ್ತದ 550 ಬೆಡ್ ಗಳನ್ನು ಖರೀದಿಸಿ ಕಲಬುರಗಿಗೆ ಕಳುಹಿಸುತ್ತಿರುವುದಾಗಿ ತಿಳಿಸಿದ್ದಾರೆ.
ಇಂದು ಬೆಡ್ ಖರೀದಿಗಾಗಿ ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶದ ವಾಡ್ ಪ್ಯಾಕ್ ಕಾರ್ಖಾನೆಗೆ ಡಿ.ಕೆ ಶಿವಕುಮಾರ್ ಅವರು ಭೇಟಿ ನೀಡಿದ್ದರು. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಕಂಪನಿಯಿಂದ ತೆಲಂಗಾಣ ಸರ್ಕಾರ 5 ಸಾವಿರ, ದೆಹಲಿ ಸರ್ಕಾರ 10 ಸಾವಿರ ಬೆಡ್ ಗಳನ್ನು ಖರೀದಿಸಿದೆ. ಇವು ಇಕೋ ಫ್ರೆಂಡ್ಲಿ ಬೆಡ್ ಗಳಾಗಿದ್ದು, 300 ಕೆಜಿ ತೂಕ ಬೆಡ್ ಮೇಲೆ ಹಾಕಿದರೂ ಏನು ಆಗಲ್ಲ. ನಾನು ಜಂಪ್ ಮಾಡಿ ಸಹ ನೋಡಿದ್ದೇನೆ. 850 ರೂಪಾಯಿಗೆ ಒಂದು ಬೆಡ್ ನೀಡಲು ಕಂಪನಿ ಸಿದ್ಧವಿದೆ. ನಮ್ಮ ರಾಜ್ಯ ಬಿಜೆಪಿ ಸರ್ಕಾರ ಒಂದು ಬೆಡ್ ಗೆ 800 ರೂಪಾಯಿ ಬಾಡಿಗೆ ಕೊಡಲು ಸಿದ್ಧವಾಗಿದೆ. ಈ ಮೂಲಕ ಸರ್ಕಾರದ ಗಮನ ಸೆಳೆಯುತ್ತಿದ್ದೇನೆ. ಈ ಕಂಪನಿಯಿಂದ ಬೆಡ್ ಖರೀದಿಸಿದರೆ ಬೆಡ್, ಬ್ಲಾಂಕೆಟ್ ಸೇರಿ ಸಾವಿರ ರೂಪಾಯಿಯಲ್ಲಿ ಮುಗಿಯುತ್ತದೆ. ಸರ್ಕಾರಕ್ಕೂ ಸಹ ಇಂತಹ ಬೆಡ್ ವೊಂದನ್ನ ಗಿಫ್ಟ್ ಕೊಡುತ್ತೇನೆ. ಕೆಪಿಸಿಸಿ ಕಚೇರಿ ಮುಂದೆ ಬೇಡ ಎಂದು ಇಲ್ಲಿಂದಲೇ ಕಲಬುರಗಿಗೆ ತಲುಪಿಸುತ್ತಿದ್ದೇವೆ ಎಂದರು.
ಇನ್ನು ಇದೇ ವೇಳೆ ಸಿದ್ದರಾಮಯ್ಯನವರು ಲೆಕ್ಕ ಕೊಡಿ ಅಂತ ಕೇಳಿದ್ದಾರೆ. ನಾನು ಉತ್ತರ ಕೊಡಿ ಎಂದು ಕೇಳುತ್ತಿದ್ದೇನೆ. ಸಿದ್ದರಾಮಯ್ಯನವರ ಲೆಕ್ಕ ಕೊಡಿ ಕಾರ್ಯಕ್ರಮ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಮ್ಮಿಕೊಳ್ಳಲಿದ್ದೇವೆ ಎಂದು ತಿಳಿಸಿದರು.