ಮಂಡ್ಯ: ರಾಜ್ಯ ಸರ್ಕಾರಕ್ಕೆ ನಾನೇ ಟಾರ್ಗೆಟ್ ಆಗಿದ್ದೇನೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.
ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ನಡೆದ ಮಂಡ್ಯ ಟೂ ಇಂಡಿಯಾ (Mandya To India) ಬೃಹತ್ ಉದ್ಯೋಗ ಮೇಳದ ನಂತರ ಮಾತನಾಡಿದ ಅವರು, ನನ್ನ ಮೇಲೆ ತನಿಖೆ ನಡೆಸುತ್ತಿರುವುದು ಯಾವ ಉದ್ದೇಶಕ್ಕೆ? ನನ್ನ ಮೇಲೆ ಮೊನ್ನೆ ಯಾವ ಆಧಾರದ ಮೇಲೆ ಕಂಪ್ಲೇಟ್ ಕೊಟ್ಟಿದ್ದೀರಾ? ಮೊನ್ನೆ ಯಾವುದೋ ಒಂದು ಎನ್‌ಸಿಆರ್ ಹಾಕಿದ್ದಾರೆ. ಎಫ್‌ಐಆರ್ ಮಾಡಿಸಲೆಬೇಕೆಂದು ಸಿಎಂ ಮನೆಗೆ ಅಧಿಕಾರಿಗಳನ್ನು ಕರೆಸಿಕೊಂಡಿದ್ದಾರೆ. ಅವರೆಲ್ಲರ ಟಾರ್ಗೆಟ್ ನಾನೇ ಎಂದಿದ್ದಾರೆ.
ಕೇಂದ್ರ ಸರ್ಕಾರಕ್ಕೆ ಇಡಿ, ಎಸ್‌ಐಟಿ ಅಸ್ತ್ರ ಎಂದು ಹೇಳುತ್ತಾರೆ. ಸಿಎಂ ಮತ್ತು ಡಿಕೆಶಿಗೆ ಇನ್ವೇಸ್ಟಿಕೇಶನ್ ಟೀಮ್‌ಗಳಾಗಿವೆ. ಇವರ ಪ್ರಕಾರ ಎಸ್‌ಐಟಿ ಎಂದರೆ ಅಸ್ತ್ರಗಳು ಎಂದರ್ಥ. ದೆಹಲಿಯಿಂದ ವಕೀಲರನ್ನು ಕರೆಸಿದ್ದಾರೆ. ಪರ ವಿರೋಧ ವಾದಗಳಾಗಿವೆ. ಅದರ ಆಧಾರದ ಮೇಲೆ ಕೋರ್ಟ್ ಯಾವ ರೀತಿ ತನಿಖೆ ಆಗಬೇಕೆಂದು ಹೇಳಿದ್ದು, ನ್ಯಾಯಯುತ ತನಿಖೆ ಆಗಬೇಕಿದೆ. ನಿಮ್ಮ ಅಧಿಕಾರಿಗಳಿಂದ ನ್ಯಾಯಯುತ ತನಿಖೆ ಸಾಧ್ಯವಾ ಎಂದು ಗುಡುಗಿದ್ದಾರೆ.
ಬೆಂಗಳೂರು (Bengaluru) ನಗರದಲ್ಲಿ ತಮ್ಮ ಹಣದ ದಾಹಕ್ಕೆ ಕೆಂಪೇಗೌಡರು ಕಟ್ಟಿದ ಕೆರೆಗಳನ್ನು ನುಂಗಿದ್ದಾರೆ. ಹೀಗಾಗಿ ಬೆಂಗಳೂರಿನಲ್ಲಿ ಮಳೆ ಅವಾಂತರ ಆಗುತ್ತಿದೆ. ನಿಮ್ಮ ಭೂ, ಹಣದ ದಾಹದಿಂದ ಬೆಂಗಳೂರು ಹೀಗೆ ಆಗಿದೆ ಎಂದು ಆರೋಪಿಸಿದ್ದಾರೆ.








