ರಾಜ್ಯ ರಾಜಕಾರಣದಲ್ಲಿ ಈಗ ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯ ನಂತರದ ಬೆಳವಣಿಗೆಗಳು ತೀವ್ರ ಕುತೂಹಲ ಕೆರಳಿಸಿವೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಕಠಿಣ ಕ್ರಮಗಳಿಗೆ ಮುಂದಾಗಿದ್ದು ಇದು ಸಚಿವ ಜಮೀರ್ ಅಹ್ಮದ್ ಖಾನ್ ಅವರ ನಿದ್ದೆಗೆಡಿಸಿದೆ. ಈಗಾಗಲೇ ಅಬ್ದುಲ್ ಜಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಅಮಾನತುಗೊಳಿಸಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಆದೇಶ ಹೊರಡಿಸಿದ್ದಾರೆ. ಇದರ ಬೆನ್ನಲ್ಲೇ ಹಿರಿಯ ನಾಯಕ ನಸೀರ್ ಅಹಮದ್ ವಿರುದ್ಧವೂ ಶಿಸ್ತು ಕ್ರಮ ಜರುಗಿಸಲಾಗಿದ್ದು ಈಗ ಎಲ್ಲರ ಕಣ್ಣು ಸಚಿವ ಜಮೀರ್ ಅಹ್ಮದ್ ಖಾನ್ ಅವರ ಮೇಲಿದೆ.
ತಮ್ಮ ಆಪ್ತರ ವಿರುದ್ಧದ ಈ ಕ್ರಮಗಳಿಂದ ಜಮೀರ್ ಅಹ್ಮದ್ ಖಾನ್ ತೀವ್ರ ಅಸಮಾಧಾನಗೊಂಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ನಾನೇನು ಕೇರಳಕ್ಕೆ ಮೋಜು ಮಸ್ತಿ ಮಾಡಲು ಹೋಗಿದ್ದೆನಾ ಎಂದು ಪ್ರಶ್ನಿಸುವ ಮೂಲಕ ತಮ್ಮ ಮೇಲಿನ ಟೀಕೆಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ನಾನು ಕೇರಳಕ್ಕೆ ಹೋಗಿದ್ದು ಪಕ್ಷದ ಕೆಲಸಕ್ಕಾಗಿ ಹೈಕಮಾಂಡ್ ಸೂಚನೆಯಂತೆ ನಾನು ಅಲ್ಲಿಗೆ ತೆರಳಿದ್ದೆ ಹೊರತು ವೈಯಕ್ತಿಕ ಪ್ರವಾಸಕ್ಕಲ್ಲ. ಹಗಲು ರಾತ್ರಿ ಎನ್ನದೆ ದಿನಕ್ಕೆ 350 ಕಿಲೋ ಮೀಟರ್ ಪ್ರಯಾಣ ಮಾಡಿ ಪಕ್ಷದ ಪರವಾಗಿ ಪ್ರಚಾರ ಮಾಡಿದ್ದೇನೆ. ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ಎಲ್ಲೂ ಅಡಗ ಕುಳಿತಿರಲಿಲ್ಲ ಎಂದು ತಮ್ಮ ಶ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.
ನನ್ನನ್ನು ಮುಂದಿನ ಟಾರ್ಗೆಟ್ ಎಂದು ಮಾಧ್ಯಮಗಳಲ್ಲಿ ಬಿಂಬಿಸಲಾಗುತ್ತಿದೆ. ಈ ಕುರಿತು ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷರ ಜೊತೆ ಚರ್ಚೆ ನಡೆಸಿದ್ದೇನೆ. ನಾಳೆ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಈ ಬಗ್ಗೆ ಮಾತನಾಡುತ್ತೇನೆ. ನನ್ನನ್ನು ಟಾರ್ಗೆಟ್ ಮಾಡಲು ಬೇರೆಯವರಿಗೆ ಅಧಿಕಾರವಿಲ್ಲ. ಒಂದು ವೇಳೆ ಕ್ರಮ ತೆಗೆದುಕೊಳ್ಳಬೇಕಾದರೆ ಅದು ರಣದೀಪ್ ಸಿಂಗ್ ಸುರ್ಜೆವಾಲ ಮುಖ್ಯಮಂತ್ರಿಗಳು ಅಥವಾ ಉಪಮುಖ್ಯಮಂತ್ರಿಗಳು ಮಾತ್ರ ಮಾಡಬೇಕು ಎಂದು ಜಮೀರ್ ಅಹ್ಮದ್ ಸವಾಲಿನ ಧಾಟಿಯಲ್ಲಿ ಮಾತನಾಡಿದ್ದಾರೆ.
ಪಕ್ಷದ ಹಿರಿಯ ನಾಯಕರಾದ ನಸೀರ್ ಅಹಮದ್ ಅವರನ್ನು ವಜಾ ಮಾಡಿರುವುದು ನನಗೆ ತುಂಬಾನೇ ನೋವುಂಟು ಮಾಡಿದೆ. ಅವರನ್ನು ಸಮಾಧಾನಪಡಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ನಾನು ಪಕ್ಷದ ಒಬ್ಬ ಸಾಮಾನ್ಯ ಸೇವಕ ಅಷ್ಟೇ. ನನ್ನ ರಾಜಕೀಯ ಜೀವನದಲ್ಲಿ ನಾನು ಎಂದಿಗೂ ಜಾತಿ ರಾಜಕಾರಣಕ್ಕೆ ಕೈ ಹಾಕಿಲ್ಲ. ಹೈಕಮಾಂಡ್ ನೀಡಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ. ಹೀಗಿರುವಾಗ ನನ್ನ ಮೇಲೆ ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಸಚಿವರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ಜಮೀರ್ ಅವರ ಸಚಿವ ಸ್ಥಾನ ಉಳಿಯುತ್ತದೆಯೇ ಅಥವಾ ಹೈಕಮಾಂಡ್ ಇವರ ವಿರುದ್ಧವೂ ಕಠಿಣ ನಿರ್ಧಾರ ಕೈಗೊಳ್ಳುತ್ತದೆಯೇ ಎಂಬುದು ರಾಜ್ಯ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.








