ಬೆಂಗಳೂರು: ಕರ್ನಾಟಕ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್ ಪಕ್ಷದ ಆಂತರಿಕ ಭಿನ್ನಮತ ಈಗ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಧ್ವನಿ ಎತ್ತುತ್ತಿರುವ ನಾಯಕರನ್ನೇ ಗುರಿಯಾಗಿಸಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಕೆಎನ್ ರಾಜಣ್ಣ ಅವರು ಹೈಕಮಾಂಡ್ ವಿರುದ್ಧ ಕಿಡಿಕಾರಿದ್ದಾರೆ. ಪಕ್ಷದ ಶಿಸ್ತಿನ ಕ್ರಮಗಳ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಅವರು, ಹೈಕಮಾಂಡ್ ನಾಯಕರಿಗೊಂದು ನ್ಯಾಯ, ರಾಜ್ಯದ ನಾಯಕರಿಗೊಂದು ನ್ಯಾಯವೇ ಎಂದು ಪ್ರಶ್ನಿಸಿದ್ದಾರೆ.
ದೊರೆ ಮಾಡಿದ್ರೆ ದಂಡ ಇಲ್ಲ ಅನ್ನೋ ಗಾದೆ ಮಾತಿನಂತೆ ಹೈಕಮಾಂಡ್ ವರ್ತಿಸುತ್ತಿದೆ ಎಂದು ರಾಜಣ್ಣ ಗುಡುಗಿದ್ದಾರೆ. ಕಾಂಗ್ರೆಸ್ ಶಿಸ್ತಿನ ಪಕ್ಷ ಎಂದು ಹೇಳಿಕೊಳ್ಳುತ್ತದೆ, ಆದರೆ ಈ ಶಿಸ್ತು ಕೇವಲ ಕೆಲವರಿಗೆ ಮಾತ್ರ ಸೀಮಿತವೇ? ಈ ಹಿಂದೆ ರಾಹುಲ್ ಗಾಂಧಿ ಅವರು ಸದ್ಗುರು ಯಾರು ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದ್ದರು. ಆದರೆ ಇಂದು ಅವರೇ ಹೋಗಿ ಸದ್ಗುರು ಜೊತೆ ಕುಳಿತುಕೊಳ್ಳುತ್ತಾರೆ. ಇದು ಶಿಸ್ತು ಮೀರಿದಂತೆ ಅಲ್ವಾ? ಎಂದು ಅವರು ನೇರವಾಗಿಯೇ ರಾಹುಲ್ ಗಾಂಧಿ ಅವರ ನಡೆಯನ್ನು ಪ್ರಶ್ನಿಸಿದ್ದಾರೆ. ದೊಡ್ಡ ನಾಯಕರು ಏನು ಮಾಡಿದರೂ ನಡೆಯುತ್ತದೆ, ಆದರೆ ನಾವು ಧ್ವನಿ ಎತ್ತಿದರೆ ಅದು ಶಿಸ್ತು ಉಲ್ಲಂಘನೆಯೇ ಎಂದು ಅವರು ಆಕ್ರೋಶ ಹೊರಹಾಕಿದ್ದಾರೆ.
ನಾನು ಎಂದಿಗೂ ಅಧಿಕಾರದ ಹಿಂದೆ ಹೋದವನಲ್ಲ. ಅಧಿಕಾರ ಸಿಕ್ಕರೆ ಅದನ್ನು ಬಡ ಜನರ ಸೇವೆಗಾಗಿ ಬಳಸಿಕೊಳ್ಳುತ್ತೇನೆ. ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ ನನ್ನನ್ನು ಅಥವಾ ಸಿದ್ದರಾಮಯ್ಯ ಅವರ ಪರ ಇರುವವರನ್ನು ಟಾರ್ಗೆಟ್ ಮಾಡುವುದು ಸರಿಯಲ್ಲ. ಅಧಿಕಾರವನ್ನು ನಾನು ಸ್ವಂತಕ್ಕೆ ಬಳಸಿಕೊಳ್ಳುವ ವ್ಯಕ್ತಿಯಲ್ಲ. ಅಧಿಕಾರದ ಲಾಭ ಪ್ರತಿಯೊಬ್ಬ ಬಡವನಿಗೂ ತಲುಪಬೇಕು ಎಂಬುದು ನನ್ನ ಆಶಯ ಎಂದು ರಾಜಣ್ಣ ಸ್ಪಷ್ಟಪಡಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಒಳಗಿನ ಈ ಬೆಳವಣಿಗೆಗಳು ಈಗ ಹೈಕಮಾಂಡ್ ವಲಯದಲ್ಲಿ ಸಂಚಲನ ಮೂಡಿಸಿವೆ. ಕೆಎನ್ ರಾಜಣ್ಣ ಅವರ ಈ ಶಾಕಿಂಗ್ ಹೇಳಿಕೆಗಳು ಪಕ್ಷದ ಆಂತರಿಕ ಶಿಸ್ತು ಮತ್ತು ನಾಯಕತ್ವದ ನಡುವಿನ ಸಂಘರ್ಷವನ್ನು ಬೀದಿಗೆ ತಂದಿವೆ. ಮುಂದಿನ ದಿನಗಳಲ್ಲಿ ಹೈಕಮಾಂಡ್ ಈ ಬಂಡಾಯದ ಧ್ವನಿಯನ್ನು ಹೇಗೆ ಹತ್ತಿಕ್ಕುತ್ತದೆ ಅಥವಾ ಸಮಾಧಾನಪಡಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ.







