ಬೆಂಗಳೂರು: ನಿರೀಕ್ಷೆಯಂತೆ ಕಳೆದ ವಾರ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ದಿ. ಡಿ.ಕೆ ರವಿ ಪತ್ನಿ ಕುಸುಮಾ ಅವರಿಗೆ ರಾಜರಾಜೇಶ್ವರಿ ನಗರದಿಂದ ಸ್ಪರ್ಧೆಗೆ ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡಿದೆ.
ಆರ್.ಆರ್ ನಗರ ಹಾಗೂ ಶಿರಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷ ಇಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆರ್.ಆರ್ ನಗರಕ್ಕೆ ಡಿ.ಕೆ ರವಿ ಪತ್ನಿ ಕುಸುಮಾ ಹಾಗೂ ಶಿರಾಕ್ಕೆ ಮಾಜಿ ಸಚಿವ ಟಿ.ಬಿ ಜಯಚಂದ್ರಗೆ ಟಿಕೆಟ್ ನೀಡಲಾಗಿದೆ.

ಆರ್.ಆರ್ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‍ಗಾಗಿ ಭಾರಿ ಪೈಪೋಟಿ ನಡೆದಿತ್ತು. ಬೆಂಗಳೂರು ಉತ್ತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹಲಗೆವಡೇರಹಳ್ಳಿಯ ಎಂ.ರಾಜಕುಮಾರ್ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿದ್ದರು. ಆದರೆ, ಡಿ.ಕೆ ರವಿ ಪತ್ನಿ ಕುಸುಮಾ ಪರ ಅನುಕಂಪದ ಅಲೆ ಕೆಲಸ ಮಾಡಬಹುದು ಎಂಬ ಲೆಕ್ಕಾಚಾರದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಟಿಕೆಟ್ ನೀಡಲಾಗಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ತಮಗೆ ಆರ್.ಆರ್ ನಗರದ ಟಿಕೆಟ್ ನೀಡಿರುವುದಕ್ಕೆ ಫೇಸ್‍ಬುಕ್‍ನಲ್ಲಿ ಕುಸುಮಾ ಸಂತಸ ಹಂಚಿಕೊಂಡಿದ್ದಾರೆ. ಕ್ಷೇತ್ರದ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಗಣನೆಗೆ ತೆಗೆದುಕೊಂಡು ಆರ್.ಆರ್ ನಗರ ಕ್ಷೇತ್ರದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ವಿಜಯ ಪತಾಕೆ ಹಾರುವಂತೆ ಮಾಡುವ ಜವಾಬ್ದಾರಿ ನನ್ನದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಹಾಗೂ ಡಿ.ಕೆ ಸುರೇಶ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.

ಉಪಚುನಾವಣೆ ಘೋಷಣೆಗೂ ಮೊದಲೇ ಶಿರಾ ಕ್ಷೇತ್ರಕ್ಕೆ ಮಾಜಿ ಸಚಿವ ಟಿ.ಬಿ ಜಯಚಂದ್ರ ಅವರ ಹೆಸರನ್ನು ಕೆಪಿಸಿಸಿ ಪ್ರಕಟಿಸಿತ್ತು. ಜಯಚಂದ್ರ ಹೆಸರನ್ನು ಎಐಸಿಸಿಗೆ ಶಿಫಾರಸು ಮಾಡಲಾಗಿತ್ತು. ಅಧ್ಯಕ್ಷೆ ಸೋನಿಯಾಗಾಂಧಿ ಒಪ್ಪಿಗೆ ಬಳಿಕ ಇಂದು ಎಐಸಿಸಿ ಚುನಾವಣಾ ಸಮಿತಿ ಅಧಿಕೃತ ಘೋಷಣೆ ಮಾಡಿದೆ.








