ಬೆಂಗಳೂರು : ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಹಾಗೂ ಹೆಚ್. ವಿಶ್ವನಾಥ್ ಗೆ ರಾಜ್ಯ ವಿಧಾನ ಪರಿಷತ್ ಚುನಾವಣೆಗೆ ಟಿಕೆಟ್ ನೀಡಲು ರಾಜ್ಯ ಬಿಜೆಪಿ ನಾಯಕರು ಒಲವು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಯಾರಿಗೆ ನೀಡಬೇಕು ಎಂದು ಚರ್ಚಿಸಲು ಬಿಜೆಪಿಯ ಕೊರ್ ಕಮಿಟಿ ಸಭೆ ನಡೆಸಲಾಗಿದೆ. ಸಭೆಯಲ್ಲಿ ಮೈತ್ರಿ ಸರ್ಕಾರ ಪತನಗೊಳಿಸಿ ಬಿಜೆಪಿ ಸರ್ಕಾರ ರಚನೆಗೆ ಕಾರಣರಾದ ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಹೆಚ್. ವಿಶ್ವನಾಥ್ , ಅವರಿಗೆ ಟಿಕೆಟ್ ನೀಡುವ ವಿಚಾರದಲ್ಲಿ ಸುಧೀರ್ಘ ಚರ್ಚೆ ನಡೆದಿದೆ.
ಈ ವೇಳೆ ಹೆಚ್. ವಿಶ್ವನಾಥ್ ಅವರಿಗೆ ಟಿಕೆಟ್ ನೀಡುವ ವಿಚಾರಕ್ಕೆ ಕೆಲ ನಾಯಕರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಯಾಕೆಂದರೆ ಆರ್, ಶಂಕರ್ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿಲ್ಲ. ಎಂ.ಟಿ.ಬಿ ನಾಗರಾಜ್ ಬಿಜೆಪಿಯ ಬಂಡಾಯ ಅಭ್ಯರ್ಥಿ ಎದರು ಸೋಲು ಕಂಡಿದ್ದಾರೆ. ಒಂದು ವೇಳೆ ಬಂಡಾಯ ಅಭ್ಯರ್ಥಿ ಇಲ್ಲದಿದ್ದರೆ ಗೆದ್ದು ಬರುತ್ತಿದ್ದರು. ಆದರೆ ವಿಶ್ವನಾಥ್ ಉಪಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. ಆದರೂ ಅವರಿಗೆ ವಿಧಾನ ಪರಿಷತ್ ಟಿಕೆಟ್ ಕೊಡುವುದ ಸರಿಯಲ್ಲ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ಯವಾಗಿದೆ ಎನ್ನಲಾಗಿದೆ.
ಸಾಕಷ್ಟು ಸಾಧಕ ಬಾಧಕಗಳ ಬಗ್ಗೆ ಚರ್ಚೆ ನಡೆಸಿದ ಬಳಿಕ ಎಂ.ಟಿ.ಬಿ ನಾಗರಾಜ್, ಆರ್.ಶಂಕರ್, ಹೆಚ್. ವಿಶ್ವನಾಥ್, ಮಾಜಿ ಶಾಸಕ ಸುನೀಲ್ ವಲ್ಲ್ಯಾಪುರೆ ಟಿಕೆಟ್ ನೀಡುವ ವಿಚಾರಕ್ಕೆ ಸಭೆ ಸಹಮತ ವ್ಯಕ್ತಪಡಿಸಿದೆ. ಜೊತೆಗೆ ರಾಜ್ಯಸಭೆ ಟಿಕೆಟ್ ಆಯ್ಕೆಯಲ್ಲಿ ಕೇಂದ್ರ ಸಮಿತಿ ತೆಗೆದುಕೊಂಡ ನಿರ್ಧಾರದ ಬಗ್ಗೆ ಸಭೆಯಲ್ಲಿ ಚರ್ಚೆ ಮಾಡಲಾಗಿದೆ.
ರಾಜ್ಯ ಕೋರ್ ಕಮಿಟಿ ಸಹಮತ ವ್ಯಕ್ತಪಡಿಸಿದ ಹೆಸರುಗಳನ್ನು ಅಂತಿಮ ಮಾಡುವಂತೆ ಕೇಂದ್ರ ಸಮಿತಿ ಮೇಲೆ ಒತ್ತಡ ಹಾಕಲು ತಂತ್ರ ರೂಪಿಸಿದೆ. ಅದಕ್ಕಾಗಿ ಸಿಎಂ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಕೇಂದ್ರ ನಾಯಕರಾದ ಪ್ರಹ್ಲಾದ್ ಜೋಶಿ, ಡಿ.ವಿ ಸದಾನಂದಗೌಡ ಸೇರಿ ಬಿಜೆಪಿ ವರಿಷ್ಠರ ಜೊತೆ ಸಮಾಲೋಚನೆ ನಡೆಸುವ ತೀರ್ಮಾನಕ್ಕೆ ಕೋರ್ ಕಮಿಟಿ ಸಭೆ ಬಂದಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.
ವರಸೆ ಬದಲಿಸಿದ ರಾಜ್ಯ ಬಿಜೆಪಿ
ಯಾವುದೇ ಚುನಾವಣೆ ಆಗಲಿ, ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಸಿ ಚರ್ಚೆ ನಡೆಸುತ್ತದೆ. ಸಭೆ ಬಳಿಕ ಚರ್ಚಿತವಾದ ಹೆಸರುಗಳನ್ನು ಲಿಖಿತ ರೂಪದಲ್ಲಿ ಕೇಂದ್ರಕ್ಕೆ ರವಾನೆ ಮಾಡುತ್ತದೆ. ಆದರೆ ಈ ಬಾರಿ ರಾಜ್ಯ ಬಿಜೆಪಿ ತನ್ನ ವರಸೆ ಬದಲಿಸಿದೆ. ರಾಜ್ಯಸಭೆ ಟಿಕೆಟ್ ವಿಷಯದಲ್ಲಿ ರಾಜ್ಯ ಕೋರ್ ಕಮಿಟಿ ಹೆಸರುಗಳನ್ನು ಫೈನಲ್ ಮಾಡಿ ಕೇಂದ್ರಕ್ಕೆ ಕಳಿಸಿತ್ತು. ಆದರೆ ಕೇಂದ್ರ ಸಮಿತಿ ಅಂತಿಮ ಕ್ಷಣದಲ್ಲಿ ಕಳಿಸಿರುವ ಲಿಖಿತ ಪಟ್ಟಿಗೆ ಮನ್ನಣೆ ನೀಡದೆ. ಪಕ್ಷದ ಸಾಮಾನ್ಯ ಕಾರ್ಯಕರ್ತರ ಹೆಸರುಗಳನ್ನು ಘೋಷಣೆ ಮಾಡಿತ್ತು. ಇದರಿಂದಾಗಿ ರಾಜ್ಯ ಬಿಜೆಪಿ ಮುಖಭಂಗ ಅನುಭವಿಸಿತ್ತು. ಇದೀಗ ರಾಜ್ಯ ವಿಧಾನ ಪರಿಷತ್ ಟಿಕೆಟ್ ವಿಚಾರದಲ್ಲಿ ಅದೆ ಮಾದರಿ ಮುಖಭಂಗ ಅನುಭವಿಸಬಾರದು ಎಂಬ ಕಾರಣಕ್ಕೆ ಹೆಸರುಗಳನ್ನು ಲಿಖಿತ ರೂಪದಲ್ಲಿ ಕಳಿಸಿಲ್ಲ . ಆದರೆ ಚರ್ಚಿತವಾದ ಹೆಸರುಗಳನ್ನು ಕೇಂದ್ರ ನಾಯಕರ ಮುಂದೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಸಿಎಂ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಒ ಮಾಡಬೇಕು ಎಂದು ಸಭೆ ತೀರ್ಮಾನ ಮಾಡಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.