ಮಾಜಿ ಸಂಸದೆ ಸುಮಲತಾ ತಮ್ಮ ರಾಜಕೀಯ ಜೀವನದ ಬಗ್ಗೆ ಪ್ರತಿಕ್ರಿಯಿಸಿ, ತಮ್ಮ ಕುಟುಂಬವು ತ್ಯಾಗ ಮಾಡಿರುವುದಾಗಿ ಹೇಳಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಸುಮಲತಾ, ಸಚಿವ ಚಲುವರಾಯಸ್ವಾಮಿಯ ಸ್ಥಾನಮಾನಕ್ಕಾಗಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎಂಬ ಹೇಳಿಕೆಯನ್ನು ತಿರಸ್ಕರಿಸಿ, ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.
‘ನಮ್ಮದು ತ್ಯಾಗ ಮಾಡಿರುವ ಕುಟುಂಬ’ ಎಂದು ಹೇಳಿದ ಸುಮಲತಾ, ತಮ್ಮ ವ್ಯಕ್ತಿತ್ವದ ತತ್ವಗಳು ಮತ್ತು ಬದ್ಧತೆಯ ಬಗ್ಗೆ ವಿವರಿಸಿದರು. ನಾನು ಕ್ಷೇತ್ರವನ್ನೇ ಬಿಟ್ಟು ಬಿಜೆಪಿಗೆ ಸೇರಿದವಳು. ನಮ್ಮ ಕುಟುಂಬ ಯಾವತ್ತೂ ಯಾವುದೇ ಸ್ಥಾನಮಾನ ಅಥವಾ ಅಧಿಕಾರಕ್ಕಾಗಿ ಆಕಾಂಕ್ಷೆ ಇಟ್ಟಿಲ್ಲ. ಅವುಗಳ ಹಿಂದೆ ಓಡಾಡುವುದಿಲ್ಲ. ನಮ್ಮ ಜೀವನದ ಉದ್ದೇಶ ಜನಸೇವೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರದ ಮಹತ್ವದ ಯೋಜನೆಗಳನ್ನು ಜನಸಾಮಾನ್ಯರ ವರೆಗೆ ತಲುಪಿಸುವುದು. ವೈಯಕ್ತಿಕ ಲಾಭಕ್ಕೆ ನಾವು ಹಂಬಲಿಸುವುದಿಲ್ಲ ಎಂದು ಸುಮಲತಾ ಹೇಳಿದ್ದಾರೆ.
ಚಲುವರಾಯಸ್ವಾಮಿ ಮಾಡಿದ್ದ ಆರೋಪಕ್ಕೆ ಅವರು ತಿರುಗೇಟು ನೀಡುತ್ತಾ, ಅವರು ಏನು ಬೇಕಾದರೂ ಹೇಳಲಿ. ನಿಜಕ್ಕೂ ನಾವು ಏನು ಮಾಡಿದ್ದೇವೆ ಮತ್ತು ಯಾಕೆ ಮಾಡಿದ್ದೇವೆ ಎಂಬುದು ನನಗೆ ಗೊತ್ತು. ಎಲ್ಲ ಅಧಿಕಾರವನ್ನೂ ನೋಡಿದ್ದೇವೆ. ಜನಪ್ರಿಯತೆಯನ್ನ ಸಿನಿಮಾ, ರಾಜಕೀಯ ರಂಗ ಎರಡರಲ್ಲೂ ನೋಡಿದ್ದೇನೆ. ಏನೂ ಕಾಣದವರು ಆ ರೀತಿ ಮಾತಾಡಬಹುದು ಎಂದು ಟಾಂಗ್ ಕೊಟ್ಟಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಮಾತಾಡುವ ಹಕ್ಕು ಇದೆ, ಆದರೆ ಅದು ನೈತಿಕತೆಯನ್ನು ಹೊಂದಿರಬೇಕು ಎಂದು ಸುಮಲತಾ ಹೇಳಿದ್ದಾರೆ.








