ಇದು ಬರೀ ಒಂದು ಫುಟ್ಬಾಲ್ ಕಥೆಯಲ್ಲ..! ಒಬ್ಬ ಕ್ರಾಂತಿಕಾರಿ ಕಾಲ್ಚೆಂಡು ಆಟಗಾರನ ಬದುಕಿನ ಯಾನ. ಆಟದ ಜೊತೆಗೆ ವರ್ಣಭೇದ ನೀತಿಯ ವಿರುದ್ದ ಹೋರಾಡುತ್ತಿರುವ ಧೀರ ಸೇನಾನಿಯ ಬದುಕಿನ ಚಿತ್ರಣ. ಕರಿಯ ಅಂತ ಹೀಯಾಳಿಸಿದವರ ಮನಸ್ಸನ್ನೇ ಗೆದ್ದ ಅಪ್ರತಿಮ ಆಟಗಾರನ ಸಾಧನೆಯ ಸಿಂಹಾವಲೋಕನ. ಕೋತಿ ಎಂದು ಜರೆದಾಗ ಇಡೀ ಮೈದಾನವನ್ನೇ ಕ್ರಾಂತಿಯ ವೇದಿಕೆಯನ್ನಾಗಿಸಿದ್ದ ಮಹಾನ್ ಹೋರಾಟಗಾರನ ಜೀವನಚರಿತ್ರೆ. ಯಶಸ್ಸಿನ ಉತ್ತುಂಗದಲ್ಲಿದ್ರೂ ಸಾಗಿ ಬಂದ ಹಾದಿಯನ್ನು ಮರೆಯದ ನಗುಮುಖದ ಸರದಾರನ ಬಯೋಗ್ರಫಿ. ಕ್ರೀಡೆ ಮತ್ತು ಸಮಾಜದಲ್ಲಿ ಕಪ್ಪು ಬಣ್ಣವೂ ಹೊಳೆಯಬೇಕು, ಸೂಕ್ತ ಸ್ಥಾನಮಾನ ಸಿಗಬೇಕು ಎಂದು ಬಯಸುವ ನಿಸ್ವಾರ್ಥಿ ವ್ಯಕ್ತಿಯ ಕಥೆ. ಕೊಳಗೇರಿಯಲ್ಲಿ ಹುಟ್ಟಿ ಬೆಳೆದು ಇಂದು ಫುಟ್ಬಾಲ್ ಸಾಮ್ರಾಜ್ಯದಲ್ಲಿ ಮೆರೆದಾಡುತ್ತಿರುವ ಒಬ್ಬ ಅಪ್ರತಿಮ ವೀರ ಕ್ರೀಡಾಪಟುವಿನ ಯಶೋಗಾಥೆ.
ಹೌದು,ಈತನ ಪ್ರತಿ ಬೆವರಿನ ಹನಿಗಳ ಹಿಂದೆ ಬಡತನದ ಬೇಗೆ ಇದೆ. ಮೈಯಲ್ಲಿ ಹರಿಯುತ್ತಿರುವ ರಕ್ತದಲ್ಲಿ ಧಗಧಗಿಸುವ ಕಿಚ್ಚು ಇದೆ. ಪ್ರತಿ ಅವಮಾನಕ್ಕೂ ಪ್ರತಿಕಾರ ತೀರಿಸಿಕೊಳ್ಳುವ ಸೇಡಿನ ಜ್ವಾಲೆ ಇದೆ. ಕಷ್ಟಗಳನ್ನು ಸಹಿಸಿಕೊಂಡು ಮಗನ ಭವಿಷ್ಯ ರೂಪಿಸಿದ್ದ ಅಪ್ಪ – ಅಮ್ಮನ ತ್ಯಾಗವಿದೆ. ಬದುಕಿನಲ್ಲಿ ಪಟ್ಟ ನೋವು ಕಷ್ಟಗಳನ್ನು ಮರೆಮಾಚುವಂತಹ ಈತನ ಮುಖದಲ್ಲಿ ನಿಷ್ಕಲ್ಮಶವಾದ ನಗುವಿದೆ. ಯಾಕಂದ್ರೆ ಆತ ಒಬ್ಬ ಮಾಮೂಲಿ ಫುಟ್ಬಾಲ್ ಆಟಗಾರನಲ್ಲ. ಇಡೀ ಫುಟ್ಬಾಲ್ ಜಗತ್ತೇ ತನ್ನತ್ತ ತಿರುಗಿನೋಡುವಂತೆ ಮಾಡಿರುವ ಬುಲೆಟ್ ಪ್ಲೇಯರ್. ಅಷ್ಟೇ ಅಲ್ಲ, ಕೋಟ್ಯಂತರ ಕಪ್ಪು ವರ್ಣೀಯರ ಬದುಕಿನ ಭರವಸೆಯ ಬೆಳಕು.
ಆತನ ಹೆಸರು ವಿನೀಶಿಯಸ್ ಜ್ಯೂನಿಯರ್.
ಕತ್ತಲೆ ಜಗತ್ತಿನ ಕಿಡಿ.. ಫುಟ್ಬಾಲ್ ಜಗತ್ತಿನ ಬೆಂಕಿ..!
ಈತನ ಬದುಕಿನ ಪಯಣ ಕೂಡ ಆರಂಭವಾಗುವುದು ಕೊಳಗೇರಿಯ ಗುಡಿಸಲಿನ ಮನೆಯಿಂದಲೇ. ಬ್ರೆಜಿಲ್ನ ರಿಯೋ ಡಿ ಜನೈರೋದ ಸಾವೋ ಗೊನ್ಸಾಲೊ ಎಂಬ ಭಯಾನಕ ಕೊಳಗೇರಿಯ ಹುಡುಗ. ಇದು ಹಿಂಸಾಚಾರ, ಗ್ಯಾಂಗ್ವಾರ್, ಡ್ರಗ್ಸ್ ವ್ಯಸನಿಗಳು ಸೇರಿದಂತೆ ಅಪರಾಧಿಗಳಿಗೆ ಆಶ್ರಯ ತಾಣವಾಗಿರುವ ಕೊಳಗೇರಿ. ಇಂತಹ ಕತ್ತಲೆಯ ಜಗತ್ತಿನಲ್ಲಿ ಹುಟ್ಟಿದ್ದ ವಿನೀಶಿಯಸ್ಗೆ ಇದರ ಪರಿವೇ ಇರಲಿಲ್ಲ. ಕೈ ಚೆಂಡು ಸಿಕ್ಕಿದ್ರೆ ಸಾಕು, ಕಾಲಿಗೆ ಹಳೆಯ ಬಟ್ಟೆ ಸುತ್ತಿಕೊಂಡು, ಹಳೆಯ ಬೂಟ್ಗಳನ್ನು ಹಾಕೊಂಡು ಚೆಂಡನ್ನು ಮನಬಂದಂತೆ ಒದೆಯುವುದು ಈತನ ದಿನ ನಿತ್ಯದ ದಿನಚರಿಯಾಗಿತ್ತು.
ಕಲ್ಲು ಮುಳ್ಳಿನಲ್ಲಿ ಹಾದಿಯಲ್ಲಿ ಬೆಳೆದ ಈ ಹುಡುಗನ ಫುಟ್ಬಾಲ್ ಪ್ರತಿಭೆಯನ್ನು ಮೊದಲು ಗುರುತಿಸಿದ್ದು ಈತನ ತಂದೆ ವಿನೀಶಿಯಸ್ ಜೋಸ್ ಪೈಶಾವೋ. ಹಗಳಿರುವ ದುಡಿದು ಮಗನನ್ನು ಫುಟ್ಬಾಲ್ ಆಟಗಾರನಾಗಿಸಬೇಕು ಎಂದು ತಂದೆ ಕನಸು ಕಾಣುತ್ತಿದ್ದ. ಆದ್ರೆ ಫುಟ್ಬಾಲ್ ಅಕಾಡೆಮಿಯಲ್ಲಿ ಜ್ಯೂನಿಯರ್ ವಿನಿಗೆ ಅವಕಾಶ ಸಿಗಲಿಲ್ಲ. ಹುಡುಗ ತುಂಬಾ ಸಣ್ಣಗಿದ್ದಾನೆ. ದೈಹಿಕವಾಗಿ ಈತ ಫುಟ್ಬಾಲ್ ಆಡಲು ಲಾಯಕ್ಕಿಲ್ಲ ಅಂತ ಕೋಚ್ಗಳು ಅವಮಾನ ಮಾಡಿ ಕಳುಹಿಸಿದ್ದರು. ಆದ್ರೆ ಛಲಬಿಡದ ವಿನಿ, ತನ್ನ 9ನೇ ವಯಸ್ಸಿನಲ್ಲಿ ಅಕಾಡೆಮಿಗೆ ಸೇರಿಕೊಂಡ. ತರಬೇತಿಯ ಶುಲ್ಕ ಕಟ್ಟಲು ಸೀನಿಯರ್ ವಿನೀಶಿಯಸ್ ಪರವೂರಿನಲ್ಲಿ ಕಟ್ಟಡ ಕಾರ್ಮಿಕನಾಗಿ ಹಗಳಿರು ದುಡಿಯುತ್ತಿದ್ರೆ, ಮಗ ವಿನಿ ಫುಟ್ಬಾಲ್ ಆಟವನ್ನೇ ಪರವಶಮಾಡಿಕೊಂಡಿದ್ದ. ಚಿರತೆಯ ವೇಗದಲ್ಲಿ ಮೈದಾನದಲ್ಲಿ ಓಡುವ ವಿನೀಶಿಯಸ್, ಬ್ರೆಜಿಲ್ನ 15, 17ವಯೋಮಿತಿ ಟೂರ್ನಿಗಳಲ್ಲಿ ರಣಕೇಸರಿಯಂತೆ ಆಡುತ್ತಿದ್ದ. ಪರಿಣಾಮ ತನ್ನ 19ನೇ ಹರೆಯದಲ್ಲೇ ಬ್ರೆಜಿಲ್ ರಾಷ್ಟ್ರೀಯ ತಂಡವನ್ನು ಸೇರಿಕೊಂಡಿದ್ದ. ಮೈದಾನದಲ್ಲಿ ಈತನ ಹಿಂದೆ ಓಡಬೇಕಾದ್ರೆ ಬೈಸಿಕಲ್ ಬೇಕು ಅಂತ ಆಟಗಾರರು ಹೇಳುತ್ತಿದ್ದರು. ಮೈದಾನದಲ್ಲಿ ಈತ ಓಡುತ್ತಿದ್ದ ಪರಿಯನ್ನು ಹುಸೇನ್ ಬೋಲ್ಟ್ ಓಟಕ್ಕೂ ಹೋಲಿಕೆ ಮಾಡಲಾಗುತ್ತಿತ್ತು. ಬ್ರೆಜಿಲ್ನ ಭರವಸೆಯ ಆಟಗಾರನಾಗಿರುವ 26ರ ಹರೆಯದ ವಿನೀಶಿಯಸ್, 2022ರ ಕತಾರ್ ಮತ್ತು 2026ರ ಫಿಫಾ ವಿಶ್ವಕಪ್ನಲ್ಲಿ ಬ್ರೆಜಿಲ್ ತಂಡದ ಟ್ರಂಪ್ಕಾರ್ಡ್ ಆಟಗಾರನಾಗಿ ಹೊರಹೊಮ್ಮಿದ್ದಾನೆ.
ರಿಯಲ್ ಮ್ಯಾಡ್ರಿಡ್ ಸಾಮ್ರಾಜ್ಯದ ಹೀರೋ..!
ಬ್ರೆಜಿಲ್ನ ಫ್ಲೆಮೆಂಗೊ ಕ್ಲಬ್ ಪರ ಆಡುತ್ತಿದ್ದ ವಿನಿ,
ತನ್ನ 16ನೇ ವಯಸ್ಸಿನಲ್ಲೇ ರಿಯಲ್ ಮ್ಯಾಡ್ರಿಡ್, ಬಾರ್ಸಿಲೋನಾ, ಮ್ಯಾಂಚೆಸ್ಟರ್ ಸಿಟಿ ಕ್ಲಬ್ಗಳ ಕಣ್ಣಿಗೆ ಬಿದ್ದಿದ್ದ. ಪ್ರತಿಷ್ಠಿತ ಮೂರು ದೈತ್ಯಕ್ಲಬ್ಗಳು ವಿನಿಯ ಆಟಕ್ಕೆ ಮನಸೋತಿದ್ದವು. ಕೊನೆಗೆ ತನ್ನ 18ನೇ ವಯಸ್ಸಿನಲ್ಲಿ ವಿನೀಶಿಯಸ್ ತನ್ನ ಕನಸಿನ ರಿಯಲ್ ಮ್ಯಾಡ್ರಿಡ್ ತಂಡದ ಜೊತೆ ಸಹಿ ಮಾಡಿಕೊಂಡಿದ್ದ. ತನ್ನ ನೆಚ್ಚಿನ ಆಟಗಾರ ಕ್ರಿಸ್ಟಿಯಾನೊ ರೋನಾಲ್ಡೊ ಧರಿಸುತ್ತಿದ್ದ ಏಳು ನಂಬರಿನ ಜೆರ್ಸಿಯನ್ನೇ ತೊಡುತ್ತಿದ್ದ. ನಂತರ ಹಿಂತಿರುಗಿ ನೋಡಲೇ ಇಲ್ಲ. ಆಟದ ಜೊತೆ ಕ್ರಾಂತಿಕಾರಿ ಹೋರಾಟದ ಮೂಲಕವೂ ಸಮಾಜದಲ್ಲಿ ಗಮನ ಸೆಳೆಯುತ್ತಿದ್ದಾನೆ.
ಸ್ಪೇನ್ ಕಾನೂನನ್ನೇ ಬದಲಾಯಿಸಿದ್ದ ವಿನಿ, ವಿಶ್ವ ಸಂಸ್ಥೆಯ ರಾಯಭಾರಿ…!
2023ರಲ್ಲಿ ರಿಯಲ್ ಮ್ಯಾಡ್ರಿಡ್ ಮತ್ತು ವಲೆನ್ಸಿಯಾ ಕ್ಲಬ್ಗಳ ನಡುವೆ ಪಂದ್ಯ ನಡೆಯುತ್ತಿತ್ತು. ಈ ವೇಳೆ, ಎದುರಾಳಿ ಕ್ಲಬ್ನ ಅಭಿಮಾನಿಗಳು ವಿನಿಯನ್ನು ಕೋತಿ ಅಂತ ಕರೆದು ನಿಂದನೆ ಮಾಡಿದ್ದರು. ಇದರಿಂದ ಮೈದಾನದಲ್ಲೇ ವಿನೀಶಿಯಸ್ ಕಣ್ಣೀರು ಹಾಕಿದ್ದ. ಹಾಗಂತ ಸುಮ್ಮನೆ ಕೂರಲಿಲ್ಲ. ಪಂದ್ಯವನ್ನು ನಿಲ್ಲಿಸಿ, ಪ್ರೇಕ್ಷಕರ ಗ್ಯಾಲರಿಗೆ ನುಗ್ಗಿ ನಿಂದಿಸಿದವರು ಇವ್ರೇ ಅಂತ ಇಡೀ ಜಗತ್ತಿನ ತೋರಿಸಿದ್ದ. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸ್ಪೇನ್ ಸರ್ಕಾರವೂ ಆರೋಪಿಗಳಿಗೆ ಎಂಟು ತಿಂಗಳ ಜೈಲು ಶಿಕ್ಷೆ ವಿಧಿಸಿತ್ತು. ಅಷ್ಟೇ ಅಲ್ಲ, ಕ್ರೀಡಾಂಗಣದಲ್ಲಿ ವರ್ಣಭೇದ ನಿಂದನೆ ನಡೆದ್ರೆ ಪಂದ್ಯವನ್ನೇ ರದ್ದು ಮಾಡುವಂತಹ ವಿನಿ ಜ್ಯೂನಿಯರ್ ಕಾನೂನನ್ನು ಜಾರಿಗೊಳಿಸಿತ್ತು. ಅಷ್ಟೇ ಅಲ್ಲ, ವಿಶ್ವ ಸಂಸ್ಥೆಯು ವಿನೀಶಿಯಸ್ ಅವರನ್ನು ಎಲ್ಲರಿಗೂ ಶಿಕ್ಷಣ ಮತ್ತು ಸಮಾನತೆಯ ಅಭಿಯಾನಕ್ಕೆ ಜಾಗತಿಕ ರಾಯಭಾರಿಯನ್ನಾಗಿ ನೇಮಿಸಿತ್ತು. ಪಿಲೆ ನಂತರ ಈ ಸ್ಥಾನ ಅಲಂಕರಿಸಿದ್ದ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರನಾಗಿದ್ದಾನೆ.
ಟಿಕಾರ್ ಬುಡುಕಟ್ಟು ಜನಾಂಗದ ಹುಡುಗ ಫುಟ್ಬಾಲ್ ಜಗತ್ತಿನ ಚಿರತೆ..!
2024ರಲ್ಲಿ ಬ್ರೆಜಿಲ್ನಲ್ಲಿ ಕಪ್ಪು ವರ್ಣೀಯ ಸಮುದಾಯದ ಅಸ್ಮಿತೆಯನ್ನು ಸಾರುವ ಗೋಲ್ಡನ್ ರೂಟ್ಸ್ ಎಂಬ ಅಭಿಯಾನ ನಡೆಯಿತ್ತು. ಈ ಅಭಿಯಾನದಲ್ಲಿ ವಿನೀಶಿಯಸ್ ಕೂಡ ಡಿಎನ್ಎ ಟೆಸ್ಟ್ ಮಾಡಿಸಿಕೊಂಡಿದ್ದ. ಅದರ ಫಲಿತಾಂಶ ಬಂದಾಗ ವಿನೀಶಿಯಸ್ ಕುಟುಂಬ ಆಶ್ಚರ್ಯಗೊಂಡಿತ್ತು. ತಮ್ಮ ಮೂಲ ವಂಶಜರ ಗುರುತು ಪತ್ತೆಯಾದಾಗ ವಿನಿ ರೋಮಾಂಚನಗೊಂಡಿದ್ದ. ವಿನೀಶಿಯಸ್ ಕುಟುಂಬ ಆಫ್ರಿಕಾದ ಕ್ಯಾಮರೂನ್ ದೇಶದ ಟಿಕಾರ್ ಬುಡಕಟ್ಟು ಜನಾಂಗಕ್ಕೆ ಸೇರಿದವರು ಎಂಬ ಸತ್ಯ ಬಯಲಾಯ್ತು. “ನನಗೆ ಇದು ಗೊತ್ತಿರಲಿಲ್ಲ. ನಾವು ಎಲ್ಲಿಂದ ಬಂದಿದ್ದೇವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಬಹುತೇಕರಿಗೆ ನಮ್ಮ ಪೂರ್ವಜರು ಯಾರು..? ಎಲ್ಲಿಂದ ಬಂದ್ರು ಅಂತ ಗೊತ್ತಿರಲಿಲ್ಲ. ಈಗ ನನ್ನ ಪೂರ್ವಜರು ಕ್ಯಾಮರೂನ್ ದೇಶವರು ಅಂತ ಗೊತ್ತಾದಾಗ ನನಗೆ ಹೆಮ್ಮೆ ಮತ್ತು ಸಂತೋಷವಾಗಿದೆ. ಈಗ ಆಟದ ಸಮಯ.. ಮೈದಾನದಲ್ಲಿ ಗೆಲುವಿಗಾಗಿ ಹೋರಾಡೋಣ” ಅಂತ ಉರುಗ್ವೆ ವಿರುದ್ಧ ಪಂದ್ಯವನ್ನಾಡಿದ್ದ ವಿನೀಶಿಯಸ್.
ಕಪ್ಪು ವರ್ಣೀಯರ ಬದುಕಿನಲ್ಲಿ ಹೊಳೆಯುವ ಧ್ರುವ ನಕ್ಷತ್ರ..!
“ನಾನು ಮೈದಾನದಲ್ಲ ಕೇವಲ ಚೆಂಡನ್ನು ಒದೆಯಲು ಬಂದಿಲ್ಲ. ಕಪ್ಪು ವರ್ಣೀಯರ ಮಕ್ಕಳಿಗೋಸ್ಕರ ನನ್ನ ಬದುಕನ್ನು ಮುಡುಪಾಗಿಟ್ಟಿದ್ದೇನೆ. ಅದಕ್ಕಾಗಿ ಹೋರಾಟ ನಡೆಸುತ್ತಲೇ ಇರುತ್ತೇನೆ. ಕಪ್ಪು ವರ್ಣೀಯ ಮಕ್ಕಳಿಗೆ ಮೈದಾನದಲ್ಲಿ ಮತ್ತು ಸಮಾಜದಲ್ಲಿ ಗೌರವ ಸಿಗಬೇಕು. ಅದಕ್ಕಾಗಿ ನಾನು ಏನು ಬೇಕಾದ್ರೂ ಮಾಡಲು ಸಿದ್ಧ ಅಂತಾನೆ ವಿನೀಶಿಯಸ್. ಕ್ರೀಡಾಂಗಣದ ಸುತ್ತ ಆವರಿಸಿಕೊಂಡಿರುವ ವರ್ಣಭೇದದ ವಿರುದ್ದ ವಿನೀಶಿಯಸ್ ಪ್ರಖರ ಸೂರ್ಯನಂತೆ ಕ್ರಾಂತಿಯ ಬೆಳಕು ಚೆಲ್ಲುತ್ತಿದ್ದಾನೆ. ಇಡೀ ಜಗತ್ತಿಗೆ ಆತ ಸಾರಿದ್ದ ಈ ಒಂದು ಸಂದೇಶ ಮಾರ್ದನಿಸುತ್ತಲೇ ಇರುತ್ತದೆ.
“ಎಲ್ಲಿಯವರೆಗೆ ಕಣ್ಣುಗಳ ಹೊಳಪಿಗಿಂತ ನಮ್ಮ ಚರ್ಮದ ಬಣ್ಣಕ್ಕೆ ಮಹತ್ವ ಸಿಗುತ್ತದೆಯೋ ಅಲ್ಲಿಯವರೆಗೆ ಯುದ್ದ ನಿರಂತರ’ – ವಿನೀಶಿಯಸ್ ಜ್ಯೂನಿಯರ್.
ಸನತ್ ರೈ
ಸಾಕ್ಷಾ ಟಿವಿ








