ವೈದ್ಯ ವಿದ್ಯಾರ್ಥಿಗಳ ಕಡ್ಡಾಯ ಸೇವೆ ಸಲ್ಲಿಕೆಗೆ ಕ್ರಮ ಕೈಗೊಳ್ಳುವಂತೆ ಪ್ರಧಾನಿಗೆ ಸಚಿವ ಡಾ.ಕೆ.ಸುಧಾಕರ್ ಮನವಿ
ಬೆಂಗಳೂರು, ಆಗಸ್ಟ್ 11, ಕೋವಿಡ್ 19 ನಿರ್ವಹಣೆ ಕುರಿತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ವೀಡಿಯೋ ಕಾನ್ಫರೆನ್ಸ್ ನಡೆಸಿದರು.
ಮಂಗಳವಾರ ನಡೆದ ವೀಡಿಯೋ ಸಭೆಯಲ್ಲಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪಾಲ್ಗೊಂಡು, ವರದಿ ನೀಡಿದರು.
ಮಾನವ ಸಂಪನ್ಮೂಲವನ್ನು ಸಮರ್ಥವಾಗಿ ಬಳಸಿಕೊಳ್ಳಲು ಪದವಿ ಮತ್ತು ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳು ಕೋರ್ಸ್ ಬಳಿಕ ಕಡ್ಡಾಯವಾಗಿ ಸೇವೆ ಸಲ್ಲಿಸುವಂತೆ ಮಾಡಬೇಕು. ಇದಕ್ಕಾಗಿ ಕೇಂದ್ರ ಸರ್ಕಾರದಿಂದ ಆದೇಶ ಹೊರಡಿಸಬೇಕು. ಕೋವಿಡ್ ಸಂಬಂಧಿತ ಚಟುವಟಿಕೆಗಳಿಗೆ ಅಂತಿಮ ವರ್ಷದ ಅರೆ ವೈದ್ಯಕೀಯ ಮತ್ತು ವೈದ್ಯ ಪದವಿ ವಿದ್ಯಾರ್ಥಿಗಳನ್ನು ಬಳಸಿಕೊಳ್ಳಲು ಅವರಿಗೆ ತರಗತಿ ಆರಂಭಿಸಬೇಕು ಎಂದು ಸಚಿವ ಡಾ.ಕೆ.ಸುಧಾಕರ್ ಅವರು ಪ್ರಧಾನಿ ಬಳಿ ಮನವಿ ಮಾಡಿದರು.
ಲಿಕ್ವಿಡ್ ಆಕ್ಸಿಜನ್ ಘಟಕಗಳು ಸುಲಭವಾಗಿ ಲಭ್ಯವಾಗುವಂತೆ ಕ್ರಮ ಕೈಗೊಳ್ಳಬೇಕು. ವೈದ್ಯ ಶಿಕ್ಷಣ ಸಂಸ್ಥೆಗಳಲ್ಲಿ ಸಂಶೋಧನೆಗೆ ಒತ್ತು ನೀಡಬೇಕು. ಮೆಡಿಕಲ್ ಕಾಲೇಜುಗಳಲ್ಲಿ ಪ್ರತಿ ವರ್ಷ 10,000 ಪದವಿ ಮತ್ತು 2,000 ಸ್ನಾತಕೋತ್ತರ ಸೀಟುಗಳನ್ನು ಹೆಚ್ಚಿಸಲು ಅನುಮತಿ ನೀಡಬೇಕು ಎಂದು ಕೋರಿದರು.
ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ, ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಉಪಸ್ಥಿತರಿದ್ದರು.