ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆಗೆ ನಡೆಯುತ್ತಿರುವ ತಂತ್ರಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ವೀರಶೈವ ಲಿಂಗಾಯತ ಮೀಸಲಾತಿ ದಾಳ ಉರುಳಿಸಿದ್ದು, ಹೈಕಮಾಂಡ್ ನಿದ್ದೆಗೆಡಿಸಿದೆ.
ಇಂದ ನಡೆದ ಸಚಿವ ಸಂಪುಟ ಸಭೆಯಲ್ಲಿ ವೀರಶೈವ-ಲಿಂಗಾಯತ ಸಮಾಜವನ್ನು ಹಿಂದುಳಿದ ವರ್ಗ(ಒಬಿಸಿ ಪಟ್ಟಿ)ಕ್ಕೆ ಸೇರಿಸುವ ನಿರ್ಣಯವನ್ನು ಸಂಪುಟ ಸಭೆಯ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ನಿರ್ಧರಿಸಿದ್ದರು.
ಆದರೆ, ಕೊನೆ ಗಳಿಗೆಯಲ್ಲಿ ವೀರಶೈವ-ಲಿಂಗಾಯತರಿಗೆ ಒಬಿಸಿ ಮೀಸಲಾತಿ ಪ್ರಸ್ತಾಪವನ್ನು ಮುಂದಿನ ಸಂಪುಟ ಸಭೆಗೆ ಮುಂದೂಡಿದ್ದಾರೆ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವೀರಶೈವ-ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸಲು ಸಂಪುಟ ಸಭೆಯಲ್ಲಿ ಪ್ರಸ್ತಾಪ ಮಂಡಿಸಲು ಮುಂದಾಗಿದ್ದರು. ಇಂದಿನ ಸಂಪುಟ ಸಭೆಗೆ ಹಲವು ಸಚಿವರು ಗೈರಾಗಿದ್ದಾರೆ. ಸಚಿವರ ಗೈರಿನ ನಡುವೆಯೂ ಮೀಸಲಾತಿ ಪ್ರಸ್ತಾಪ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಯಡಿಯೂರಪ್ಪ ಸಿದ್ಧತೆ ಮಾಡಿಕೊಂಡಿದ್ದರು.

ಮೀಸಲಾತಿ ವಿಚಾರವಾಗಿ ಕಾನೂನು ವ್ಯಾಪ್ತಿಯನ್ನು ನೋಡಬೇಕಿದೆ. ಹೀಗಾಗಿ ಈ ವಿಷಯವನ್ನು ಮುಂದಕ್ಕೆ ಹಾಕುವಂತೆ ಅಡ್ವೋಕೇಟ್ ಜನರಲ್ ಆಕ್ಷೇಪದ ವಿಚಾರವನ್ನು ಕಾನೂನು ಸಚಿಬ ಜೆ.ಸಿ ಮಾಧುಸ್ವಾಮಿ ಸಂಪುಟ ಸಭೆಗೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ಮೀಸಲಾತಿ ಪ್ರಸ್ತಾಪವನ್ನು ಮುಂದೂಡಲಾಯಿತು ಎನ್ನಲಾಗಿದೆ.
ಆತುರದ ತೀರ್ಮಾನ ಬೇಡ ಎಂದು ಹೈಕಮಾಂಡ್ ಸಲಹೆ
ವೀರಶೈವ ಲಿಂಗಾಯತರಿಗೆ ಮೀಸಲಾತಿ ಕಲ್ಪಿಸಲು ಒಬಿಸಿ ಪಟ್ಟಿಗೆ ಸೇರಿಸಲು ಸಂಪುಟ ಸಭೆಯ ಅನುಮೋದನೆ ಪಡೆದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಿಎಂ ಯಡಿಯೂರಪ್ಪ ನಿರ್ಧರಿಸಿದ್ದರು. ಇಂದಿನ ಸಂಪುಟ ಸಭೆ ಬಗ್ಗೆ ಹಲವು ಸಚಿವರಿಗೆ ಮಾಹಿತಿಯೂ ಇರಲಿಲ್ಲ ಎನ್ನಲಾಗಿದೆ. ಉಡುಪಿಯಲ್ಲಿ ಮಾತನಾಡಿದ ಡಿಸಿಎಂ ಅಶ್ವತ್ಥ ನಾರಾಯಣ ಕೂಡ ತಮಗೆ ಸಂಪುಟ ಸಭೆ ಮಾಹಿತಿ ಇಲ್ಲ ಎಂದಿದ್ದಾರೆ.
ಮಾಹಿತಿ ಇದ್ದ ಆರ್.ಆಶೋಕ್, ಡಿಸಿಎಂ ಲಕ್ಷ್ಮಣ್ ಸವದಿ, ರಮೇಶ್ ಜಾರಕಿಹೊಳಿ ಸೇರಿದಂತೆ ಕೆಲ ಸಚಿವರು ಸಿ.ಟಿ ರವಿ ಕಚೇರಿ ಪೂಜೆ ನೆಪದಲ್ಲಿ ದೆಹಲಿಗೆ ಹಾರಿದ್ದಾರೆ. ಹೈಕಮಾಂಡ್ ಭೇಟಿ ಮಾಡಿ ಒತ್ತಡ ಹಾಕಲು ದಿಲ್ಲಿಯಲ್ಲಿ ಕಸರತ್ತು ನಡೆಸಿದ್ದಾರೆ.
ಒಂದೆಡೆ ಸಂಪುಟ ವಿಸ್ತರಣೆ ವಿಚಾರದಲ್ಲಿ ಬಿಜೆಪಿಯಲ್ಲೇ ಎರಡು ಬಣಗಳಾಗಿದ್ದು, ಯಡಿಯೂರಪ್ಪ ಓಟಕ್ಕೆ ಬ್ರೇಕ್ ಹಾಕಲು ಬಿಎಸ್ವೈ ವಿರೋಧಿ ಬಣ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದೆ. ಮತ್ತೊಂದೆಡೆ, ಎರಡು ಬಾರಿ ದೆಹಲಿಗೆ ಹೋಗಿ ಸಂಪುಟ ವಿಸ್ತರಣೆಗೆ ಗ್ರೀನ್ ಸಿಗ್ನಲ್ ಕೊಡಿ ಎಂದು ಖುದ್ದು ಮುಖ್ಯಮಂತ್ರಿಗಳೇ ಮನವಿ ಮಾಡಿ ಬಂದಿದ್ದರೂ ಅಮಿತ್ ಶಾ ಸೇರಿದಂತೆ ಯಾರೋಬ್ಬರೂ ಕ್ಯಾರೇ ಅನ್ನದೇ ಇರುವುದು ಯಡಿಯೂರಪ್ಪ ಅವರ ಕೋಪ ನೆತ್ತಿಗೇರುವಂತೆ ಮಾಡಿದೆ.

ಹೀಗಾಗಿ ತಮ್ಮ ಅವಧಿಯಲ್ಲಿಯೇ ವೀರಶೈವ-ಲಿಂಗಾಯತರಿಗೆ ಒಬಿಸಿ ಮೀಸಲಾತಿ ಕಲ್ಪಿಸುವ ಮೂಲಕ ಲಿಂಗಾಯತರ ಪ್ರಶ್ನಾತೀತ ನಾಯಕರಾಗಿ ಹೊರ ಹೊಮ್ಮುವುದು ಯಡಿಯೂರಪ್ಪ ಅವರ ಲೆಕ್ಕಾಚಾರವಾಗಿದೆ.
ಒಂದು ವೇಳೆ ಸಂಪುಟ ಸಭೆಯಲ್ಲಿ ಮೀಸಲಾತಿ ಪ್ರಸ್ತಾಪವನ್ನು ಅಂಗೀಕರಿಸಿ ಕೇಂದ್ರಕ್ಕೆ ಕಳಿಸಿದರೆ, ಕೇಂದ್ರ ಸರ್ಕಾರ ಕೂಡ ಬೇರೆ ದಾರಿ ಇಲ್ಲದೆ ಪ್ರಸ್ತಾಪಕ್ಕೆ ಒಪ್ಪಿಗೆ ಕೊಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಆಗ, ವೀರಶೈವ-ಲಿಂಗಾಯತ ಸಮುದಾಯಕ್ಕೆ ಒಬಿಸಿ ಮೀಸಲಾತಿ ಕೊಡಿಸಿದ್ದು ನಾನೇ ಎಂದು ಯಡಿಯೂರಪ್ಪ ಕ್ರೆಡಿಟ್ ತೆಗೆದುಕೊಳ್ಳುತ್ತಾರೆ.

ಆಗ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್ ಸೇರಿದಂತೆ ಯಾರೂ ಮುಟ್ಟಲು ಆಗಲ್ಲ. ಒಂದು ವೇಳೆ ಮುಟ್ಟಿದರೆ, ರಾಜ್ಯಾದ್ಯಂತ ಲಿಂಗಾಯತ ಸಮುದಾಯ ರಾಜ್ಯಾದ್ಯಂತ ಬೀದಿಗಿಳಿಯುವ ಅಪಾಯವಿದೆ.
ಇದರ ಅಪಾಯದ ಮುನ್ಸೂಚನೆ ಅರಿತೇ ಇಷ್ಟು ದಿನ ಸಿಎಂ ಯಡಿಯೂರಪ್ಪ ಅವರ ಸಂಪರ್ಕಕ್ಕೆ ಸಿಗದೆ ಆಟ ಆಡಿಸುತ್ತಿದ್ದ ಬಿಜೆಪಿಯ ಚಾಣಕ್ಯ ಅಮಿತ್ ಶಾ, ಬಿಎಸ್ವೈಗೆ ಕರೆ ಮಾಡಿ ಮೀಸಲಾತಿ ಪ್ರಸ್ತಾಪ ಹಾಗೂ ಸಂಪುಟ ವಿಸ್ತರಣೆ ವಿಚಾರದಲ್ಲಿ ಆತುರ ಬೇಡ ಎಂದು ಸಲಹೆ ನೀಡಿದ್ದಾರೆ.
ಬೇರೆ ಸಮುದಾಯಗಳಿಂದಲೂ ಮೀಸಲಾತಿ ಬೇಡಿಕೆ
ಒಂದು ವೇಳೆ ವೀರಶೈವ-ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಕ್ಕೆ ಸೇರಿಸುವಂತೆ ಶಿಫಾರಸು ಮಾಡಿದರೆ ಕೇಂದ್ರ ಸರ್ಕಾರ ಇಕ್ಕಟ್ಟಿಗೆ ಸಿಲುಕುತ್ತದೆ. ಬೇರೆ ಬೇರೆ ಸಮುದಾಯಗಳಿಂದಲೂ ಇದೇ ರೀತಿ ಮೀಸಲಾತಿಗೆ ಬೇಡಿಕೆ ಬರುತ್ತದೆ. ಮೀಸಲಾತಿ ಕಲ್ಪಿಸದೇ ಹೋದರೆ ಕೇಂದ್ರದ ಮೇಲೆ ಗೂಬೆ ಕೂರಿಸುವ ಕೆಲಸ ಆಗುತ್ತದೆ. ಹೀಗಾಗಿ ಆತುರದ ತೀರ್ಮಾನದಿಂದ ಹಿಂದೆ ಸರಿಯುವಂತೆ ಬಿಜೆಪಿ ಹೈಕಮಾಂಡ್ ನಾಯಕರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆಯಲ್ಲಿ ಈ ಪ್ರಸ್ತಾಪ ಕೈಬಿಡಲಾಗಿದೆ ಎನ್ನಲಾಗಿದೆ.
ಎರಡು ದಿನಗಳಲ್ಲಿ ಸಂಪುಟ ವಿಸ್ತರಣೆ; ಬಿಎಸ್ವೈ
ಶೀಘ್ರವೇ ಸಂಪುಟ ವಿಸ್ತರಣೆ ಆಗಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜತೆ ಈಗಷ್ಟೇ ಮಾತನಾಡಿದ್ದೇನೆ. ಇನ್ನೆರಡು ದಿನಗಳಲ್ಲಿ ಪಟ್ಟಿ ಬರಲಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ.
ಸಚಿವ ಸಂಪುಟ ಸಭೆಗೂ ಮುನ್ನ ಮಾತನಾಡಿದ ಅವರು, ಲಿಂಗಾಯತ ಸಮುದಾಯವನ್ನು ಒಬಿಸಿಗೆ ಸೇರಿಸುವ ಯಾವುದೇ ತೀರ್ಮಾನವಾಗಿಲ್ಲ. ಕೇಂದ್ರ ಬಿಜೆಪಿ ನಾಯಕರ ಸಲಹೆಯನ್ನು ಕೇಳಬೇಕಿದೆ. ಹೀಗಾಗಿ ದೆಹಲಿಗೆ ಹೋಗಿ ಬಂದ ನಂತರ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಿಎಂ ಹೇಳಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








