ಬೆಂಗಳೂರು : ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮಿನಿ ಸಮರಕ್ಕೆ ಮುಹೂರ್ತ ಫಿಕ್ಸ್ ಆಗಿದ್ದು, ಬಿಜೆಪಿ ಟಿಕೆಟ್ ಗಾಗಿ ಭಾರಿ ಪೈಪೋಟಿ ಏರ್ಪಟ್ಟಿದೆ.
ಅದರಲ್ಲೂ ನಾನೇ ಬಿಜೆಪಿ ಅಭ್ಯರ್ಥಿ ಎಂದು ಇಷ್ಟು ದಿನ ನೆಮ್ಮದಿಯಾಗಿದ್ದ ಮಾಜಿ ಶಾಸಕ ಮುನಿರತ್ನಗೆ ಭಾರಿ ಶಾಕ್ ಎದುರಾಗಿದೆ.
ಆರ್ ಆರ್ ನಗರದ ಶಾಸಕರಾಗಿದ್ದ ಮುನಿರತ್ನ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರ್ಪಡೆಗೊಂಡಿದ್ದರು.
ಹೀಗಾಗಿ ಸುಲಭವಾಗಿ ಬಿಜೆಪಿ ಟಿಕೆಟ್ ಪಡೆಯುವ ನಿರೀಕ್ಷೆಯಲ್ಲೂ ಸಹ ಇದ್ದರು.
ಆದ್ರೆ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಮುನಿರತ್ನ ಹಾಗೂ ತುಳಸಿ ಮುನಿರಾಜು ಗೌಡ ಅವರ ಹೆಸರುಗಳನ್ನು ಕೇಂದ್ರ ಚುನಾವಣಾ ಸಮಿತಿಗೆ ರವಾನಿಸಿದೆ.
ಅಂದಹಾಗೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರ ಹಿಡಿಯಲು ಕಾರಣರಾದ ವಲಸೆ ಬಿಜೆಪಿಗರಿಗೆ ಪಕ್ಷದ ಟಿಕೆಟ್, ಸರ್ಕಾರದಲ್ಲಿ ಸೂಕ್ತ ಸ್ಥಾನ ನೀಡುವುದಾಗಿ ಸಿಎಂ ಬಿ.ಎಸ್.ಯಡಿಯೂರಪ್ಪ ಈ ಹಿಂದೆಯೇ ಮಾತು ಕೊಟ್ಟಿದ್ದರು. ಅದರಂತೆ ನಡೆದುಕೊಂಡಿದ್ದಾರೆ ಕೂಡ.
ಈಗ ಮುನಿರತ್ನ ವಿಚಾರದಲ್ಲೂ ಬಿಎಸ್ ವೈ ಕೊಟ್ಟ ಮಾತು ಉಳಿಸಿಕೊಳ್ಳಬೇಕಾದ ಒತ್ತಡದಲ್ಲಿದ್ದಾರೆ.
ಇದನ್ನೂ ಓದಿ : ಮಹಾತ್ಮ ಗಾಂಧಿ, ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನ : ಮೋದಿ ನಮನ
ಹೀಗಾಗಿಯೇ ಮುನಿರತ್ನ ಹೆಸರನ್ನು ಮಾತ್ರ ಕೇಂದ್ರ ಚುನಾವಣಾ ಸಮಿತಿಗೆ ಕಳುಹಿಸಬೇಕೆಂದು ಸಿಎಂ ಯಡಿಯೂರಪ್ಪ ಪಟ್ಟು ಹಿಡಿದಿದ್ದರು.
ಆದರೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ತುಳಸಿ ಮುನಿರಾಜು ಗೌಡ ಅವರ ಹೆಸರನ್ನು ಕಳುಹಿಸಲು ಸಲಹೆ ನೀಡಿದ್ದಾರೆ.
ತುಳಸಿ ಮುನಿರಾಜು ಗೌಡ ಬಿಜೆಪಿ ನಿಷ್ಠಾವಂತ ಕಾರ್ಯಕರ್ತರಾಗಿದ್ದು ಅವರನ್ನು ಕೈಬಿಡುವ ಪ್ರಶ್ನೆಯೆ ಇಲ್ಲ ಎಂದು ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ.
ಇದರಿಂದ ಮುನಿರತ್ನಗೆ ಸದ್ಯ ದೆಹಲಿಯ ಬಿಜೆಪಿಯ ಬಿಗ್ ಬಾಸ್ ಗಳು ಯಾರ ಹೆಸರನ್ನು ಫೈನಲ್ ಮಾಡುತ್ತಾರೋ ಎಂದು ತಲೆ ಬಿಸಿ ಮಾಡಿಕೊಂಡಿದ್ದಾರೆ.
ಒಂದು ವೇಳೆ ಹೈಕಮಾಂಡ್ ತುಳಸಿ ಮುನಿರಾಜುಗೆ ಟಿಕೆಟ್ ನೀಡಿದರೇ ಮುಂದಿನ ನಡೆ ಏನು ಎಂದು ತಮ್ಮ ಆಪ್ತರ ಬಳಿ ಮುನಿರತ್ನ ಚರ್ಚಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.