ತುಳುವಿನಲ್ಲಿ ಟ್ವೀಟ್ ಮಾಡಿ ತುಳು ಭಾಷೆ ಅಭಿಯಾನಕ್ಕೆ ಬೆಂಬಲ ಸೂಚಿಸಿದ ನಟ ಜಗ್ಗೇಶ್
ಮಂಗಳೂರು, ಅಗಸ್ಟ್16: ಜೈ ತುಳುನಾಡು ಸಂಘಟನೆ ಇಂದಿನಿಂದ ತುಳು ಭಾಷೆಗೆ ಕೂಡ ಸಾಂವಿಧಾನಿಕ ಮಾನ್ಯತೆ ಸಿಗಬೇಕು, ತುಳು ಭಾಷೆಯನ್ನು ಕೂಡ ನೂತನ ಶಿಕ್ಷಣ ನೀತಿ-2020ರಡಿಯಲ್ಲಿ ಸೇರಿಸಬೇಕು ಎಂಬ ನಿಟ್ಟಿನಲ್ಲಿ ಜನಪ್ರತಿನಿಧಿಗಳ ಗಮನ ಸೆಳೆಯಲು #EducationInTulu ಅನ್ನುವ ಹ್ಯಾಷ್‌ಟ್ಯಾಗ್‌ನಲ್ಲಿ ಟ್ವೀಟ್ ಅಭಿಯಾನ ಆಯೋಜಿಸಿದೆ.

ನೂತನವಾಗಿ ಶಿಫಾರಸ್ಸುಗೊಂಡ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಕಾರ 5 ಅಥವಾ 8ನೇ ತರಗತಿಯವರೆಗೆ ಬೋಧನ ಮಾಧ್ಯಮ ಸ್ಥಳಿಯ ಅಥವಾ ಮಾತೃಭಾಷೆಯಲ್ಲಿರಬೇಕು ಎಂಬ ಅಂಶವನ್ನು ಉಲ್ಲೇಖಿಸಲಾಗಿದೆ. ಇದರಿಂದಾಗಿ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಚೇದಕ್ಕೆ ಸೇರಿಸಬೇಕೆನ್ನುವ ಒತ್ತಾಯಕ್ಕೆ ಮತ್ತಷ್ಟು ಶಕ್ತಿ ಬಂದಂತಾಗಿದೆ.
ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತುಳು ಮಾತೃ ಭಾಷೆಯ ವಿದ್ಯಾರ್ಥಿಗಳಿಗೆ ತುಳು ಭಾಷೆಯಲ್ಲಿಯೇ ಶಿಕ್ಷಣ ಸಿಗುವಂತಾಗಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದ ಗಮನ ಸೆಳೆಯಲು ಜೈ ತುಳುನಾಡು ಸಂಘಟನೆ #EducationInTulu ಟ್ವೀಟ್ ಅಭಿಯಾನವನ್ನು ಪ್ರಾರಂಭಿಸಿದ್ದು, ಈಗಾಗಲೇ ಅನೇಕರು ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ.

ಕನ್ನಡದ ನವರಸ ನಾಯಕ ಜಗ್ಗೇಶ್ ಕೂಡಾ ಈ ಅಭಿಯಾನಕ್ಕೆ ಬೆಂಬಲ ಸೂಚಿಸಿ, #EducationInTulu ಟ್ವೀಟ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಾರೆ. ನಾನು ಕೂಡ ತುಳು ಭಾಷೆಗಾಗಿ ನಿಮ್ಮ ಜೊತೆ ಇದ್ದೇನೆ ಎಂದು ನಟ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.








