ಕರುನಾಡಿನಲ್ಲಿ ಹೃದಯ ಗೀತೆ ಮೊಳಗಿಸಿದ ಸ್ವರ ಮಾಂತ್ರಿಕ ಎಸ್ ಪಿಬಿ
ಎಸ್.ಪಿ. ಬಾಲಸುಬ್ರಮಣ್ಯಂ..
ಪ್ರೀತಿಯ ಎಸ್ ಪಿಬಿ.. ಇವರ ವ್ಯಕ್ತಿತ್ವವನ್ನು ಹೇಗೆ ಬಣ್ಣಿಸಬೇಕು ಅಂತ ಗೊತ್ತಾಗುತ್ತಿಲ್ಲ. ಅವರ ಸ್ವರವನ್ನು ಹೇಗೆ ವರ್ಣಿಸಬೇಕು ಎಂಬುದೇ ತಿಳಿಯುತ್ತಿಲ್ಲ. ಅವರ ಗಾಯನದ ಮೆರವಣಿಗೆಗೆ ಯಾವ ಪದಪುಂಜಗಳನ್ನು ಜೋಡಣೆ ಮಾಡಬೇಕು ಎಂಬುದೇ ಹೊಳೆಯುತ್ತಿಲ್ಲ. ನೂರೊಂದು ನೆನಪುಗಳನ್ನು ಬಿಟ್ಟು ಹೋದ ಗಾನ ಬ್ರಹ್ಮನಿಗೆ ಯಾವ ರೀತಿ ನಮನ ಸಲ್ಲಿಸಬೇಕು ಎಂಬುದನ್ನು ಹೇಳೋಕೆ ಸಾಧ್ಯವಿಲ್ಲ. ಎಸ್ ಪಿಬಿ ಇನ್ನಿಲ್ಲ. ಈ ಕೊರೋನಾ ಅನ್ನೋ ಮಹಾ ಮಾರಿ ಗಾನ ಗಂಧರ್ವನ ಬದುಕನ್ನೇ ಕಸಿದುಕೊಂಡಿತ್ತಲ್ಲ.. ಅದನ್ನು ಅರಗಿಸಿಕೊಳ್ಳಲಾಗುತ್ತಿಲ್ಲ.
ಹೌದು, ಎಸ್ ಪಿಬಿ ಕರುನಾಡಿನ ಮನೆ ಮನೆ ಗೆದ್ದ ಗಾಯಕ. ಹಾಗಂತ ಕನ್ನಡಿಗರ ಪಾಲಿಗೆ ಮಾತ್ರ ಗಾಯಕನಾಗಿರಲಿಲ್ಲ. ತೆಲುಗು, ತಮಿಳು, ಮಲೆಯಾಳಂ, ಹಿಂದಿ ಸೇರಿದಂತೆ 16 ಭಾಷೆಗಳಲ್ಲಿ ಹಾಡಿರುವ ಏಕೈಕ ಗಾಯಕ ಎಸ್ ಪಿ ಬಾಲಸುಬ್ರಮಣ್ಯಂ. ಸುಮಾರು 40ಸಾವಿರ ಹಾಡುಗಳಿಗೆ ಜೀವ ತುಂಬಿದ ಸಂಗೀತದ ಜಾದುಗಾರ. ಎಸ್‍ಪಿಬಿ ಹಾಡಿರುವ ಪ್ರತಿ ಹಾಡುಗಳು ಸದಾ ನೆನಪಿನಲ್ಲಿರುತ್ತದೆ. ನವರಸಗಳಿಗೆ ಸ್ವರ ಮಾಧುರ್ಯದ ಕಂಪನ್ನು ನೀಡಿ ಕೇಳುಗರಿಗೆ ಇಂಪು ನೀಡಿದ್ದ ಎಸ್ ಪಿಬಿ ಇನ್ನೂ ನೆನಪು ಮಾತ್ರ.
ಆದ್ರೆ ಅವರ ಹಾಡುಗಳು ಎಂದೆಂದಿಗೂ ಜನ ಮಾನಸದಲ್ಲಿ ಶಾಶ್ವತವಾಗಿರುತ್ತದೆ. ನಗುವ ನಯನ ಎಂದು ಹಾಡುತ್ತಾ ಕರುನಾಡಿಗೆ ಬಂದ ಎಸ್ ಪಿ ಬಾಲಸುಬ್ರಮಣ್ಯಂ ನಂತರ ಹಿಂತಿರುಗಿ ನೋಡಲೇ ಇಲ್ಲ. ಅನಿಲ್ ಕಪೂರ್, ವಿಷ್ಣುವರ್ಧನ್, ಶಂಕರ್ ನಾಗ್, ಅನಂತ್ ನಾಗ್, ಶಶಿ ಕುಮಾರ್, ರವಿಚಂದ್ರನ್ ಹೀಗೆ ಕನ್ನಡ ಪ್ರಮುಖ ನಾಯಕರ ರೋಮ್ಯಾಂಟಿಕ್ ನೃತ್ಯಗಳಿಗೆ, ಭಗ್ನ ಪ್ರೇಮಿಯ ವಿರಹ ವೇದನೆಯ ಹಾಡುಗಳಿಗೆ ಸ್ವರ ನೀಡಿದ್ದ ಎಸ್ ಪಿಬಿ ಕನ್ನಡದವರೇ ಆಗಿಬಿಟ್ಟಿದ್ದರು.
ಇನ್ನು ಕನ್ನಡ ಭಾಷೆ, ನೆಲ, ಜಲ ವಿಚಾರದ ಹಾಡುಗಳನ್ನು ಎದೆ ತುಂಬಿ ಹಾಡಿದ್ದರು. ಜನಪದ ಶೈಲಿಯ ಹಾಡುಗಳಿಗೂ ಸೈ ಎನಿಸಿಕೊಂಡಿದ್ದರು. ಎಸ್‍ಪಿಯ ಹೃದಯ ಮತ್ತು ಮನಸ್ಸಿನಿಂದ ಹೊರಹೊಮ್ಮಿರುವ ಆ ಹಾಡುಗಳನ್ನು ಮತ್ತೆ ಮತ್ತೆ ಕೇಳಬೇಕು ಅಂತ ಅನ್ನಿಸುತ್ತದೆ. ಕನ್ನಡದ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾಗುತ್ತಿದ್ದ ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಮೂಲಕ ಅನೇಕ ಯುವ ಗಾಯಕರನ್ನು ಬೆಳಕಿಗೆ ತಂದಿದ್ದ ಕೀರ್ತಿ ಕೂಡ ಎಸ್‍ಪಿಬಿಗೆ ಸಲ್ಲುತ್ತದೆ.
ಇನ್ನು ಎಸ್‍ಪಿಬಿ ಬರೀ ಸಿನಿಮಾ ಹಾಡುಗಳನ್ನು ಮಾತ್ರ ಹಾಡಿಲ್ಲ. ಕನ್ನಡದಲ್ಲಿ ಅನೇಕ ಭಕ್ತಿ ಗೀತೆಗಳನ್ನು ಹಾಡಿದ್ದಾರೆ. ಪ್ರತಿ ಮನೆಯಲ್ಲೂ ಎಸ್‍ಪಿಬಿ ಹಾಡಿರುವ ಭಕ್ತಿ ಪ್ರಧಾನ ಗೀತೆಗಳು ಮೊಳಗುತ್ತಿರುತ್ತವೆ. ಅದ್ರಲ್ಲೂ ತಿರುಪತಿ ವೆಂಕಟೇಶ್ವರ, ಧರ್ಮಸ್ಥಳ ಮಂಜುನಾಥ ಸ್ವಾಮಿ, ಕುಕ್ಕೆ ಸುಬ್ರಮಣ್ಯ ಕ್ಷೇತ್ರಗಳ ಹಾಡು ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿವೆ.
ಎಸ್‍ಪಿಬಿಗೆ ಭಾಷೆ ಮುಖ್ಯವಾಗಿರಲಿಲ್ಲ. ಅವರು ಸಂಗೀತವನ್ನೇ ಧರ್ಮ ಅಂತ ನಂಬಿಕೊಂಡಿದ್ದರು. ಅನೇಕ ಬಾರಿ ತೆಲುಗು, ತಮಿಳು, ಮಲೆಯಾಳಂ ಕಾರ್ಯಕ್ರಮಗಳಲ್ಲಿ ಕನ್ನಡ ಹಾಡಿನ ತುಣುಕುಗಳನ್ನು ಹಾಡುತ್ತಿದ್ದರು. ಕನ್ನಡ ನಾಡು, ಕನ್ನಡ ಹಾಡುಗಳು ಅಂದ್ರೆ ಎಸ್‍ಬಿಗೆ ತುಂಬಾನೇ ಇಷ್ಟ. ಈ ವಿಚಾರವಾಗಿಯೇ ಅನೇಕ ಬಾರಿ ಎಸ್‍ಪಿಬಿ ಹೇಳುತ್ತಿದ್ದರು. ನಾನು ಇನ್ನೊಂದು ಜನ್ಮದಲ್ಲಿ ಕನ್ನಡ ನೆಲದಲ್ಲಿ ಹುಟ್ಟಿಬರುತ್ತೇನೆ ಎಂದು.
ಎಸ್‍ಪಿಬಿ ಪಾತ್ರಗಳಿಗೆ ಜೀವತುಂಬುವಂತೆ ಹಾಡುತ್ತಿದ್ದರು. ಪಾತ್ರಗಳನ್ನು ಪರವಶಮಾಡಿಕೊಂಡು ಹಾಡುತ್ತಿದ್ದ ಪರಿಯಿಂದಲೇ ಅವರು ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದರು. ತನ್ನ ವೃತ್ತಿ ಮತ್ತು ವೈಯಕ್ತಿಕ ಬದುಕಿನಲ್ಲಿ ಎಂದೂ ವಿವಾದಗಳನ್ನು ಮೈಮೇಲೆ ಎಳೆದುಕೊಳ್ಳಲಿಲ್ಲ. ಮೃದುಭಾಷಿಯಾಗಿರುವ ಎಸ್.ಪಿ. ಬಾಲಸುಬ್ರಮಣ್ಯಂ, ಎಲ್ಲರ ಜೊತೆಗೂ ಬೆರೆಯುತ್ತಿದ್ದರು. ಎಸ್‍ಪಿಬಿ ಮನಸ್ಸು ಶುದ್ಧ. ಅಲ್ಲಿ ಒಂಚೂರು ಕಲ್ಮಶವಿರಲಿಲ್ಲ. ಎಲ್ಲರನ್ನು ಪ್ರೀತಿಯಿಂದ ಮಾತನಾಡುವ ಎಸ್‍ಬಿಪಿ ಅಜಾತಶತ್ರುವಾಗಿದ್ದರು.
ಒಟ್ಟಿನಲ್ಲಿ ಕರುನಾಡಿನಲ್ಲಿ ಹೃದಯ ಗೀತೆ ಹಾಡಿ ತನ್ನ ತವರಿನಲ್ಲಿ ಮಣ್ಣಾಗುತ್ತಿದ್ದಾರೆ. ಅವರು ನಡೆದು ಬಂದ ಹಾದಿ ಯುವ ಗಾಯಕರಿಗೆ ಮಾದರಿಯಾಗಿದ್ದಾರೆ. ಸಾಹಿತ್ಯ, ಭಾಷೆಗಳನ್ನು ಹೆಮ್ಮೆ ಮೂಡಿಸುವಂತೆ ಮಾಡಿರುವ ಸ್ವರ ಮಾಂತ್ರಿಕ ನಮ್ಮ ಎಸ್‍ಪಿಬಿ. ವಾಸ್ತವ ಬದುಕಿನ ಕಥೆಯು ಮುಗಿದು ಹೋದರೂ ಮುಗಿಯದಿರಲಿ ಈ ಬಂಧನ